ADVERTISEMENT

ದಸರಾ ಕುಸ್ತಿಗೆ ತೆರೆ: ದಾವಣಗೆರೆಯ ಕಿರಣ್‌ ‘ದಸರಾ ಕಂಠೀರವ’

ಸದಾಶಿವ ‘ದಸರಾ ಕೇಸರಿ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 19:51 IST
Last Updated 4 ಅಕ್ಟೋಬರ್ 2019, 19:51 IST
ದಸರಾ ಕುಸ್ತಿಯಲ್ಲಿ ಪ್ರಶಸ್ತಿ ಪಡೆದ ಲೀನಾ ಸಿದ್ದಿ (ದಸರಾ ಕಿಶೋರಿ), ಪ್ರವೀಣ್‌ ಎಂ. ಚಿಕ್ಕಹಳ್ಳಿ (ದಸರಾ ಕುಮಾರ), ಸದಾಶಿವ ನಲವಡೆ (ದಸರಾ ಕೇಸರಿ) ಮತ್ತು ಕಿರಣ್‌ ದಾವಣಗೆರೆ (ದಸರಾ ಕಂಠೀರವ) ಅವರು ಬೆಳ್ಳಿ ಗದೆ ಪ್ರದರ್ಶಿಸಿದರು
ದಸರಾ ಕುಸ್ತಿಯಲ್ಲಿ ಪ್ರಶಸ್ತಿ ಪಡೆದ ಲೀನಾ ಸಿದ್ದಿ (ದಸರಾ ಕಿಶೋರಿ), ಪ್ರವೀಣ್‌ ಎಂ. ಚಿಕ್ಕಹಳ್ಳಿ (ದಸರಾ ಕುಮಾರ), ಸದಾಶಿವ ನಲವಡೆ (ದಸರಾ ಕೇಸರಿ) ಮತ್ತು ಕಿರಣ್‌ ದಾವಣಗೆರೆ (ದಸರಾ ಕಂಠೀರವ) ಅವರು ಬೆಳ್ಳಿ ಗದೆ ಪ್ರದರ್ಶಿಸಿದರು   

ಮೈಸೂರು: ಕುಸ್ತಿ ಪ್ರೇಮಿಗಳ ಚಪ್ಪಾಳೆಯ ನಡುವೆ ಬಿಗಿಪಟ್ಟುಗಳನ್ನು ಹಾಕಿದ ದಾವಣಗೆರೆಯ ಕಿರಣ್‌ ಅವರು ದಸರಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ‘ದಸರಾ ಕಂಠೀರವ’ ಪ್ರಶಸ್ತಿ ಗಳಿಸಿದರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಶುಕ್ರ ವಾರ ನಡೆದ ಪೈಪೋಟಿಯಲ್ಲಿ ಕಿರಣ್ ಅವರು ಬೆಳಗಾವಿಯ ಶಿವಯ್ಯ ಪೂಜಾರಿ ವಿರುದ್ಧ ಗೆದ್ದರು. 30 ನಿಮಿಷಗಳ ಹಣಾಹಣಿಯಲ್ಲಿ ಕಿರಣ್‌ 11–0 ಪಾಯಿಂಟ್‌ಗಳಿಂದ ಮೇಲುಗೈ ಸಾಧಿಸಿದರು. ಅವರಿಗೆ ಒಂದೂಕಾಲು ಕೆ.ಜಿ.ತೂಕದ ಬೆಳ್ಳಿ ಗದೆಯನ್ನು ಕಾಣಿಕೆಯಾಗಿ ಬಹುಮಾನವಾಗಿ ನೀಡಲಾಯಿತು.

‘ದಸರಾ ಕೇಸರಿ’ ಪ್ರಶಸ್ತಿಗೆ ನಡೆದ 30 ನಿಮಿಷಗಳ ಹೋರಾಟದಲ್ಲಿ ಧಾರವಾಡದ ಸದಾಶಿವ ನಲವಡೆ ಅವರು ತಮ್ಮದೇ ಊರಿನವರಾದ ಅನಿಲ್‌ ದಳವಾಯಿ ವಿರುದ್ಧ 10–3 ಪಾಯಿಂಟ್‌ಗಳಿಂದ ಜಯ ಸಾಧಿಸಿದರು.

ADVERTISEMENT

‘ದಸರಾ ಕುಮಾರ’ ಪ್ರಶಸ್ತಿಗೆ ನಡೆದ ಸೆಣಸಾಟದಲ್ಲಿ ಮೈಸೂರಿನ ಪ್ರವೀಣ್‌ ಎಂ. ಚಿಕ್ಕಹಳ್ಳಿ ಅವರು ಕೆ.ಕುಮಾರ್‌ ವಿರುದ್ಧ ಗೆದ್ದರು. ಈ ಪ್ರಶಸ್ತಿಗೆ 20 ನಿಮಿಷಗಳ ಕಾದಾಟ ನಿಗದಿಪಡಿಸಲಾಗಿತ್ತು. ಪ್ರವೀಣ್‌ ಅವರು 13ನೇ ನಿಮಿಷದಲ್ಲಿ ಎದುರಾಳಿಯನ್ನು ಚಿತ್‌ ಮಾಡಿದರು. ‘ದಸರಾ ಕೇಸರಿ’, ‘ದಸರಾ ಕುಮಾರ’ ಮತ್ತು ‘ದಸರಾ ಕಿಶೋರಿ’ ಗೆದ್ದವರು ತಲಾ ಒಂದು ಕೆ.ಜಿ, ಮುಕ್ಕಾಲು ಕೆ.ಜಿ. ಮತ್ತು ಅರ್ಧ ಕೆ.ಜಿ. ತೂಕದ ಗದೆಯನ್ನು ಪಡೆದುಕೊಂಡರು.

ಲೀನಾ ಸಿದ್ದಿ ಸಾಧನೆ

‘ದಸರಾ ಕಿಶೋರಿ’ ಪ್ರಶಸ್ತಿಗೆ ನಡೆದ ಮಹಿಳೆಯರ ಕುಸ್ತಿಯಲ್ಲಿ ಹಳಿಯಾಳದ ಲೀನಾ ಸಿದ್ದಿ ಅವರು ಗದುಗಿನ ಎಚ್‌. ಪ್ರೇಮಾ ಅವರನ್ನು ಮಣಿಸಿದರು. ಈ ಮೂಲಕ ‘ದಸರಾ ಕಿಶೋರಿ’ ಪ್ರಶಸ್ತಿ ಪಡೆದ ಸಿದ್ದಿ ಜನಾಂಗದ ಮೊದಲ ಕುಸ್ತಿಪಟು ಎಂಬ ಗೌರವ ಪಡೆದರು.

‘ಈ ಹಿಂದೆ ಎರಡು ವರ್ಷ ದಸರಾ ಕುಸ್ತಿಯಲ್ಲಿ ಪಾಲ್ಗೊಂಡಿದ್ದೆ. ಆದರೆ ದಸರಾ ಕಿಶೋರಿ ಪ್ರಶಸ್ತಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೆದ್ದೆ. ಈ ಸಾಧನೆ ಸಂತಸ ನೀಡಿದೆ’ ಎಂದು ಲೀನಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.