ಮಾಂಟೆಸಿಲ್ವಾನೊ (ಇಟಲಿ): ಎಂಟು ವರ್ಷ ವಯಸ್ಸಿನ ದಿವಿತ್ ರೆಡ್ಡಿ ಅವರು ಮಂಗಳವಾರ ಇಲ್ಲಿ ಮುಕ್ತಾಯಗೊಂಡ ವಿಶ್ವ ಕೆಡೆಟ್ಸ್ (ಎಂಟು ವರ್ಷದೊಳಗಿನವರ) ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡನು.
ತೆಲಂಗಾಣದ ಪೋರ ದಿವಿತ್ (ಪ್ರಸ್ತುತ ರೇಟಿಂಗ್ 1784), ಸ್ವದೇಶದ ಸಾತ್ವಿಕ್ ಮತ್ತು ಚೀನಾದ ಝಿಮಿಂಗ್ ಗುವೊ ಜೊತೆ ಅಗ್ರಸ್ಥಾನಕ್ಕೆ ಟೈ ಮಾಡಿಕೊಂಡಿದ್ದನು. ಆದರೆ ಉತ್ತಮ ಟೈಬ್ರೇಕರ್ ಆಧಾರದಲ್ಲಿ ಚಿನ್ನ ದಿವಿತ್ ಪಾಲಾಯಿತು. ಸಾತ್ವಿಕ್ ಬೆಳ್ಳಿ ಮತ್ತು ಗುವೊ ಕಂಚಿನ ಪದಕ ಗಳಿಸಿದರು.
ನಾಲ್ಕು ಗೆಲುವಿನೊಡನೆ ಅಭಿಯಾನ ಆರಂಭಿಸಿದ ದಿವಿತ್ ನಂತರ ಎರಡು ಪಂದ್ಯಗಳಲ್ಲಿ ಸೋತಿದ್ದನು. ಆದರೆ ಕೊನೆಯ ಐದು ಸುತ್ತುಗಳಲ್ಲಿ ಜಯಗಳಿಸಿ ಪುಟಿದೆದ್ದ. ಹತ್ತನೇ ಸುತ್ತಿನಲ್ಲಿ ತನಗಿಂತ ಹೆಚ್ಚಿನ ರೇಟಿಂಗ್ ಹೊಂದಿದ್ದ ಲಿನ್‌ಯುವಾನ್ (1877) ಮತ್ತು ಕೊನೆಯ ಸುತ್ತಿನಲ್ಲಿ ರಿಝಾತ್ (1783) ವಿರುದ್ಧ ಜಯಗಳಿಸಿದನು.
ವಿಶ್ವ ಚೆಸ್‌ನಲ್ಲಿ ಭಾರತ ಸಾಧಿಸುತ್ತಿರುವ ಪ್ರಾಬಲ್ಯ ಮುಂದುವರಿಸುವಂತೆ ದಿವಿತ್ ಗೆಲುವು ದಾಖಲಾಯಿತು. ಈ ಬಾಲಕನ ಪೋಷಕರು ಹೈದರಾಬಾದಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದಾರೆ. ವಿಶಾಖಪಟ್ಟಣದ ಕೋಚ್ ರಾಮಕೃಷ್ಣ ಪೋಲಾವರಪು ಅವರಿಂದ ಆನ್‌ಲೈನ್ ಕೋಚಿಂಗ್ ಪಡೆಯುತ್ತಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.