ADVERTISEMENT

ಸೆಮಿಫೈನಲ್‌ಗೆ ಶಿವ, ಸಚಿನ್‌

ಫಿನ್ಲೆಂಡ್‌ನಲ್ಲಿ ನಡೆಯುತ್ತಿರುವ ಜೀಬೀ ಬಾಕ್ಸಿಂಗ್ ಟೂರ್ನಿ

ಪಿಟಿಐ
Published 9 ಮಾರ್ಚ್ 2019, 18:37 IST
Last Updated 9 ಮಾರ್ಚ್ 2019, 18:37 IST
ಶಿವ ಥಾಪಾ ಸಚಿನ್ ಸಿವಾಚ್‌
ಶಿವ ಥಾಪಾ ಸಚಿನ್ ಸಿವಾಚ್‌   

ನವದೆಹಲಿ: ಭಾರತದ ಶಿವ ಥಾಪಾ ಮತ್ತು ಸಚಿನ್ ಸಿವಾಚ್ ಅವರು ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ ನಡೆಯುತ್ತಿರುವ ಜೀಬೀ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು.

ಶನಿವಾರ ನಡೆದ 60 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಶಿವ ಥಾಪಾ 5–0ಯಿಂದ ಪೋಲೆಂಡ್‌ನ ಡೊಮಿನಿಕ್‌ ಪಲಕ್ ಅವರನ್ನು ಮಣಿಸಿದರು. ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಶಿವ ಥಾಪಾಗೆ ಪೋಲೆಂಡ್ ಬಾಕ್ಸರ್ ಸರಿಸಾಟಿಯಾಗಲೇ ಇಲ್ಲ.

ಹೀಗಾಗಿ ತಾಪಾ ಏಕಪಕ್ಷೀಯವಾಗಿ ಗೆದ್ದು ಸಂಭ್ರಮಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ರಷ್ಯಾದ ಮಿಖಾಯಲ್‌ ವರ್ಲಮೊವ್‌ ಎದುರು ಸೆಣಸುವರು.

ADVERTISEMENT

ಸಚಿನ್ ಸಿವಾಚ್‌ ಮತ್ತು ರಷ್ಯಾದ ತಾಮಿರ್‌ ಗಲನೊವ್‌ ನಡುವೆ ತುರು ಸಿನ ಪೈಪೋಟಿ ನಡೆಯಿತು. ಛಲದಿಂದ ಕಾದಾಡಿದ 20 ವರ್ಷದ ಸಚಿನ್‌ 4–1ರಿಂದ ಗೆದ್ದರು. ಮುಂದಿನ ಸುತ್ತಿನಲ್ಲಿ ಅವರಿಗೆ ಕಿರ್ಗಿಸ್ತಾನದ ಆಜತ್ ಉಸೆನಲಿವ್‌ ಎದುರಾಳಿಯಾಗಿದ್ದಾರೆ.

ಮೊಹಮ್ಮದ್ ಹುಸಮುದ್ದೀನ್‌, ಕವಿಂದರ್‌ ಸಿಂಗ್ ಬಿಷ್ಠ್‌, ದಿನೇಶ್ ಡಾಗರ್‌ ಮತ್ತು ನವೀನ್ ಕುಮಾರ್ ಕೂಡ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು.

56 ಕೆಜಿ ವಿಭಾಗದಲ್ಲಿ ಮೊಹಮ್ಮದ್‌ 5–0ಯಿಂದ ರಷ್ಯಾದ ಓವಿಕ್‌ ಒಗನಿಸಿಯನ್‌ ಎದುರು ಗೆದ್ದರು.

2017ರ ವಿಶ್ವ ಚಾಂಪಿಯನ್‌ಷಿಪ್‌ನ 52 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಗಮನ ಸೆಳೆದಿದ್ದ ಕವಿಂದರ್‌ ಇಲ್ಲಿ 56 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದಿದ್ದರು.

ಕಿರ್ಗಿಸ್ತಾನದ ಅಲ್ಮಾನ್‌ಬೆಟ್‌ ಅಲಿಬೆಕೊವ್‌ ಎದುರು ಅವರು ನಿರಾಯಾಸದಿಂದ ಗೆದ್ದರು. 69 ಕೆಜಿ ವಿಭಾಗದಲ್ಲಿ ದಿನೇಶ್‌, ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಇವಾಲ್ಡಾಸ್ ಪೆಟ್ರಾಕಾಸ್‌ ಎದುರು ಗೆದ್ದರು. 91+ ವಿಭಾಗದಲ್ಲಿ ನವೀನ್‌ ಸ್ಥಳೀಯ ಕ್ರೀಡಾಪಟು ಅಂತಿ ಲೆಹ್ಮುವಸ್ವಿರ್ಪಿ ಅವರನ್ನು ಮಣಿಸಿದರು.

ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸುಮಿತ್ ಸಾಂಗ್ವಾನ್‌ (91 ಕೆಜಿ) ಮತ್ತು ಯುವ ಬಾಕ್ಸರ್‌ ಗೋವಿಂಗ್‌ ಸಹಾನಿ (49 ಕೆಜಿ) ಬೈ ಪಡೆದು ಸೆಮಿಫೈನಲ್ ಪ್ರವೇಶಿಸಿದರು. ಪ್ರಯಾಗ್ ಚಾಹಾಣ್‌ (75 ಕೆಜಿ) ಮತ್ತು ಸಂಜಯ್‌ (81 ಕೆಜಿ) ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋತು ಹೊರಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.