ADVERTISEMENT

ಥಾಯ್ಲೆಂಡ್ ಓಪನ್ ಬಾಕ್ಸಿಂಗ್ ಟೂರ್ನಿ:: ಫೈನಲ್‌ಗೆ ಲಗ್ಗೆಯಿಟ್ಟ ಆಶಿಶ್‌, ಗೋವಿಂದ್‌

ಥಾಯ್ಲೆಂಡ್ ಓಪನ್ ಬಾಕ್ಸಿಂಗ್ ಟೂರ್ನಿ: ಮೋನಿಕಾ ಜಯಭೇರಿ

ಪಿಟಿಐ
Published 6 ಏಪ್ರಿಲ್ 2022, 13:28 IST
Last Updated 6 ಏಪ್ರಿಲ್ 2022, 13:28 IST
ಎದುರಾಳಿಗೆ ಪಂಚ್ ಮಾಡಿದ ಆಶಿಶ್ ಕುಮಾರ್ (ಬಲ)– ಟ್ವಿಟರ್‌ ಚಿತ್ರ
ಎದುರಾಳಿಗೆ ಪಂಚ್ ಮಾಡಿದ ಆಶಿಶ್ ಕುಮಾರ್ (ಬಲ)– ಟ್ವಿಟರ್‌ ಚಿತ್ರ   

ವದೆಹಲಿ: ಭಾರತದ ಆಶಿಶ್ ಕುಮಾರ್‌, ಗೋವಿಂದ್‌ ಸಹಾನಿ, ವರಿಂದರ್ ಸಿಂಗ್ ಮತ್ತು ಮೋನಿಕಾ ಅವರು ಥಾಯ್ಲೆಂಡ್‌ ಓಪನ್ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಟೂರ್ನಿಯ ಫೈನಲ್ ತಲುಪಿದ್ದಾರೆ.

ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ನಡೆಯುತ್ತಿರುವ ಸ್ಪರ್ಧೆಯ 81 ಕೆಜಿ ವಿಭಾಗದ ನಾಲ್ಕರ ಘಟ್ಟದ ಬೌಟ್‌ನಲ್ಲಿ ಆಶಿಶ್‌ 5–0ಯಿಂದ ಇಂಡೊನೇಷ್ಯಾದ ಮೈಕೆಲ್ ರಾಬರ್ಟ್‌ ಮುಸ್ಕಿಟಾ ಅವರನ್ನು ಪರಾಭವಗೊಳಿಸಿದರು. ಆಶಿಶ್ ಅವರು ಕಳೆದ ಆವೃತ್ತಿಯಲ್ಲಿ 75 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

48 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಗೋವಿಂದ್ ಬೆವರು ಹರಿಸಬೇಕಾಯಿತು. ವಿಯೆಟ್ನಾಂನ ಎನ್‌ಗುಯೆನ್‌ ಲಿನ್‌ ಫುಂಗ್‌ ಮತ್ತು ಭಾರತ ಬಾಕ್ಸರ್‌ ನಡುವಣ ಬೌಟ್‌ನಲ್ಲಿ ಬಿರುಸಿನ ಪಂಚ್‌ಗಳು ವಿನಿಮಯಗೊಂಡವು. ಆದರೆ ಒತ್ತಡ ಮೀರುವಲ್ಲಿ ಯಶಸ್ವಿಯಾದ ಗೋವಿಂದ್‌ 4–1ರಿಂದ ಜಯ ತಮ್ಮದಾಗಿಸಿಕೊಂಡರು.

ADVERTISEMENT

60 ಕೆಜಿ ವಿಭಾಗದಲ್ಲಿ ವರಿಂದರ್ ಅವರಿಗೆ ಪ್ಯಾಲೆಸ್ಟೀನ್‌ನ ಅಬ್ದೆಲ್ ರೆಹಮಾನ್‌ ಅಬುನಾಬ್ ವಿರುದ್ಧ ವಾಕ್‌ಓವರ್ ಲಭಿಸಿತು.

ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ 26 ವರ್ಷದ ಮೋನಿಕಾ ಅವರು ವಿಯೆಟ್ನಾಂನ ಟ್ರಾನ್‌ ಥಿ ಡಿಯೆಮ್‌ ಕಿವ್‌ ಅವರನ್ನು ಏಕಪಕ್ಷೀಯವಾಗಿ ಮಣಿಸಿದರು.

75 ಕೆಜಿ ವಿಭಾಗದ ಸೆಣಸಾಟದಲ್ಲಿ ಥಾಯ್ಲೆಂಡ್‌ನ ಪಾರ್ನಿಪಾ ಚೂಟಿ ಅವರನ್ನು 5–0ಯಿಂದ ಸೋಲಿಸಿದ ಭಾಗ್ಯವತಿ ಕಚಾರಿ ಕೂಡ ನಾಲ್ಕರ ಘಟ್ಟಕ್ಕೆ ಕಾಲಿಟ್ಟರು.

ಪುರುಷರ 52 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಅಮಿತ್ ಪಂಘಲ್‌ ಥಾಯ್ಲೆಂಡ್‌ನ ಥಾಂಕೊನ್‌ ಓನಾಯೆಮ್‌ ಅವರನ್ನು ಸೋಲಿಸಿದರು. ಆದರೆ ರೋಹಿತ್‌ ಮೋರ್‌ (57 ಕೆಜಿ ವಿಭಾಗ) ಥಾಯ್ಲೆಂಡ್‌ನ ರುಜಾಕ್ರನ್ ಜುಂಟ್‌ರಾಂಗ್ ಎದುರು ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.