ADVERTISEMENT

ಜೋಡೆತ್ತಿನ ‘ಗಾಡಾ ಸ್ಪರ್ಧೆ’

ಶಶಿಧರಸ್ವಾಮಿ ಆರ್.ಹಿರೇಮಠ
Published 7 ಜನವರಿ 2019, 19:30 IST
Last Updated 7 ಜನವರಿ 2019, 19:30 IST
ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

‘ರಾಮಗೊಂಡನಳ್ಳಿ ರಾಮ-ಲಕ್ಷ್ಮಣ ಬಂದ್ರು ದಾರಿ ಬಿಡಿ’ ಎಂದು ಮೈಕ್‌ನಲ್ಲಿ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಗಾಡಾಕ್ಕೆ ಕಟ್ಟಿದ ಜೋಡೆತ್ತುಗಳು ಚಿನ್ನಾಟವಾಡುತ್ತಾ ಮಿಂಚಿನಂತೆ ಓಡಿದ್ದೇ ಓಡಿದ್ದು. ಅಕ್ಕಪಕ್ಕದಲ್ಲಿ ನಿಂತಿದ್ದವರು ಹರ್ಷೋದ್ಘಾರದೊಂದಿಗೆ ಟವೆಲ್ ಎತ್ತಿ ಸುತ್ತುತ್ತಾ ಶಿಳ್ಳೆ ಹಾಕಿದರು. ಗಾಡಾ ಓಡಿಸುವವನಿಗೆ ಹುರಿದುಂಬಿಸಿದರು. ಇನ್ನೂ ಕೆಲವರು ಕೇಕೆ ಹಾಕುತ್ತಾ ಗಾಡಾ ಹಿಂದೆಯೇ ಬೆನ್ನ ಹತ್ತಿ ಓಡಿದರು...

ಹಾವೇರಿ ಜಿಲ್ಲೆ ಬಿಸಲಹಳ್ಳಿಯಲ್ಲಿ ಇತ್ತೀಚೆಗಷ್ಟೇ ಮುಗಿದ ‘ಜೋಡೆತ್ತಿನ ಗಾಡಾ ಸ್ಪರ್ಧೆ’ ಹೀಗೆ ರಣೋತ್ಸಾಹದಿಂದ ಕೂಡಿತ್ತು. ಗಾಡಿ ಓಡಿಸುವವರದ್ದು ಒಂದು ತೂಕದ ಉತ್ಸಾಹವಾದರೆ, ಅದರಲ್ಲಿ ಪಾಲ್ಗೊಂಡಿದ್ದ ರಾಸುಗಳು, ಸ್ಪರ್ಧೆ ನೋಡಲು ಜಮಾಯಿಸಿದ್ದ ರೈತರದ್ದು, ಮತ್ತೊಂದು ತೂಕದ ಸಂಭ್ರಮ.

ಮೂವತ್ತೈದು ಜೋಡೆತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಬೆಳಿಗ್ಗೆ 8 ರಿಂದ ಕತ್ತಲಾಗುವವರೆಗೂ ಸ್ಪರ್ಧೆ ನಡೆಯಿತು. ಇಪ್ಪತ್ತು ಮಂದಿಗೆ ವಿವಿಧ ಹಂತದ ಬಹುಮಾನಗಳನ್ನು ವಿತರಿಸಿದರು. ಕರ್ಜಗಿಯ ಜೋಡೆತ್ತಿಗೆ ಪ್ರಥಮ ಬಹುಮಾನ – 2 ಬೈಕ್. ದ್ವಿತೀಯ ಬಹುಮಾನ ಒಂದು ಬೈಕ್, ನಂತರ ಚಿನ್ನ, ಬೆಳ್ಳಿ, ಹಣ.. ಹೀಗೆ ಹಂತ ಹಂತವಾಗಿ ಬಹುಮಾನ ವಿತರಿಸಿದರು.

ADVERTISEMENT

ಬಿಸಲಹಳ್ಳಿಯಲ್ಲಿ ಸ್ಪರ್ಧೆ ಮುಗಿಯುವ ವೇಳೆಗೆ ಜ. 8ರಂದು ಮಲ್ಲೂರಿನಲ್ಲಿ, ಜ.12ಕ್ಕೆ ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿತ್ತು. ಈಗ ಆಸಕ್ತ ರೈತರು ಸ್ಪರ್ಧೆಗಳಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಸುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

****

ಸ್ಪರ್ಧೆ ತಯಾರಿ ಹೀಗಿರುತ್ತದೆ

ಸುಗ್ಗಿ ಮುಗಿಸಿ, ಹೊಲ ಖಾಲಿ ಮಾಡಿ, ರೈತರು, ರಾಸುಗಳು ವಿಶ್ರಮಿಸಿಕೊಳ್ಳುವ ಸಮಯದಲ್ಲೇ ಉತ್ತರ ಕರ್ನಾಟಕ ಭಾಗದ ಹಲವು ಗ್ರಾಮಗಳಲ್ಲಿ ಜೋಡೆತ್ತಿನ ‘ಗಾಡಾ ಸ್ಪರ್ಧೆ’ ಶುರುವಾಗುತ್ತದೆ. ಒಂದೂರಿನ ನಂತರ ಮತ್ತೊಂದು ಊರಿನಲ್ಲಿ ಸ್ಪರ್ಧೆ ನಡೆಯುತ್ತದೆ. ಈ ಕ್ರೀಡೆಗೆ ಬಳಸುವ ವಾಹನ ಚಕ್ಕಡಿ ಅಥವಾ ಗಾಡಿಯನ್ನೇ ಹೋಲುತ್ತಿದ್ದರೂ, ಸ್ವಲ್ಪ ವಿಭಿನ್ನವಾಗಿ ಕಾಣುವುದರಿಂದ ರೈತರು ‘ಗಾಡಾ’ ಎಂದೇ ಕರೆಯುತ್ತಾರೆ. ಹಾಗಾಗಿ ಇದು ‘ಗಾಡಾ ಸ್ಪರ್ಧೆ’ಯಾಗಿಯೇ ಚಾಲ್ತಿಯಲ್ಲಿದೆ.

ಸ್ಪರ್ಧೆಗೂ ಮುನ್ನ ಖಾಲಿ ಹೊಲವನ್ನು ಸ್ವಚ್ಛಗೊಳಿಸಿ, ರೋಣುಗಲ್ಲು ಹೊಡೆದು, ಎರಡು ಸಾವಿರ ಅಡಿ ಉದ್ದ ಹಾಗೂ ಒಂದು ಗಾಡಾ ನಿಲ್ಲುವಷ್ಟು ಅಗಲವಾದ ‘ಟ್ರ್ಯಾಕ್‌’ ಅನ್ನು ರೈತರೇ (ಆಯೋಜಕರೂ ಅವರೇ) ಸಿದ್ಧಪಡಿಸುತ್ತಾರೆ. ಟ್ರ್ಯಾಕ್ ಎರಡು ಬದಿಗೂ ಅಳತೆಯ ಗುರುತುಗಳ ಬೋರ್ಡ್‌ ನೆಟ್ಟಿರುತ್ತಾರೆ. ಆಯೋಜಕರು ಸ್ಪರ್ಧೆಯ ದಿನಾಂಕ, ನಡೆಯುವ ಜಾಗ, ಪ್ರವೇಶ ಶುಲ್ಕ, ನಿಯಮಗಳನ್ನೊಳಗೊಂಡ ಕರಪತ್ರ ಮುದ್ರಿಸಿ ಗ್ರಾಮಗಳಿಗೆ ಹಂಚುತ್ತಾರೆ.

ಸ್ಪರ್ಧೆ ನಡೆಯುವ ಬಗೆ

ನಿತ್ಯ ತಮ್ಮೊಂದಿಗೆ ಕೃಷಿ ಚಟುವಟಿಕೆಯಲ್ಲಿ ಜತೆಯಾಗುವ ಎತ್ತುಗಳನ್ನೇ ಸ್ಪರ್ಧೆಗೆ ಬಳಸಿಕೊಳ್ಳುತ್ತಾರೆ. ‘ಅಯ್ಯೋ, ಅವುಗಳಿಗೆ ನೋವಾಗುವುದಿಲ್ಲವೇ, ಶ್ರಮವಾಗುವುದಿಲ್ಲವೇ’ ಎಂದು ರೈತರನ್ನು ಕೇಳಿದರೆ, ‘ಆಗಲ್ಲ ಬಿಡ್ರಿ. ಅವುಗಳಿಗೆ ನಾವು ಹೊಡೆಯೋದಿಲ್ಲ, ಶಬ್ದ ಮಾಡಿ, ಬೆದರಿಸುತ್ತೇವೆ. ಅವೆಲ್ಲ ಚಿನ್ನಾಟ ಆಡ್ಕೊಂಡೇ ಓಡ್ತಾವೆ’ ಎನ್ನುತ್ತಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎತ್ತುಗಳಿಗೆ ಹಿಂದಿನ ದಿನ ರಾತ್ರಿ ‘ಭರ್ಜರಿ ಊಟೋಪಚಾರ’ ನಡೆಯುತ್ತದೆ.

ಮುಂಜಾನೆ 8ಕ್ಕೆ ಸ್ಪರ್ಧೆ ಶುರು. ಅಷ್ಟರೊಳಗೆ ಭಾಗವಹಿಸುವವರು ಪ್ರವೇಶ ಶುಲ್ಕ ತುಂಬಿ ಓಟಕ್ಕೆ ಸಜ್ಜಾಗಿರಬೇಕು. ಒಂದು ಗಾಡಾ ಟ್ರ್ಯಾಕ್‌ನಲ್ಲಿರುತ್ತದೆ. ಇನ್ನೆರಡು ಸ್ಪರ್ಧೆಗೆ ಅಣಿಯಾಗುತ್ತಿರುತ್ತವೆ. ಖಾಲಿ ಗಾಡಾದ ನೊಗಕ್ಕೆ ಪಟಗಾಣಿಯಿಂದ ಜೋಡೆತ್ತು ಕಟ್ಟುತ್ತಾರೆ. ಗಾಡಾ ಓಡಿಸುವ ವ್ಯಕ್ತಿ ಮುಂದೆ ನಿಂತು, ಒಂದು ಕೈಯಲ್ಲಿ ಎತ್ತುಗಳ ಹಗ್ಗ ಹಿಡಿದು ಜಗ್ಗುತ್ತಾ, ಇನ್ನೊಂದು ಕೈಯಲ್ಲಿ ಬಾರಕೋಲು ಚಾಟಿ ಹಿಡಿದು ಬೆದರಿಸುತ್ತಾರೆ. ಎತ್ತುಗಳು ರಭಸವಾಗಿ ಓಡುತ್ತವೆ. ಸ್ಪರ್ಧೆ ಆಯೋಜಕರಲ್ಲೊಬ್ಬರು ಕೈಯಲ್ಲಿ ಟೈಮರ್ ಹಿಡಿದು ಗಾಡಿಯ ಹಿಂಬದಿಯಲ್ಲಿ ಕುಳಿತಿರುತ್ತಾರೆ. ನಿಗದಿತ ಸಮಯ ಪೂರ್ಣಗೊಳ್ಳುತ್ತಲೇ, ಕೈಯಲ್ಲಿದ್ದ ಕೆಂಪು ಬಣ್ಣದ ಗಂಟನ್ನು ಕೆಳಗೆ ಹಾಕುತ್ತಾರೆ. ಅಳತೆ ಬೋರ್ಡ್‌ನಿಂದ ಗಂಟು ಇರುವಲ್ಲಿಯವರೆಗೆ ಅಳತೆ ಮಾಡಿ, ಗಾಡಾ ಓಡಿದ ದೂರ ಮತ್ತು ಸಮಯ ಲೆಕ್ಕ ಹಾಕಿ ಗುರುತು ಹಾಕಿಕೊಳ್ಳುತ್ತಾರೆ. ಒಂದು ನಿಮಿಷದಲ್ಲಿ ಹೆಚ್ಚು ದೂರ ಕ್ರಮಿಸಿದ ಜೋಡೆತ್ತುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಕೊಡುತ್ತಾರೆ. ಗೆಲವು ಸಾಧಿಸಿದ ಎತ್ತುಗಳ ಮಾಲೀಕರಿಗೆ ಬೈಕ್, ಬಂಗಾರ, ಬೆಳ್ಳಿ, ಹಣ... ಹೀಗೆ ಆಯೋಜಕರು ಏನು ಘೋಷಿಸಿರುತ್ತಾರೋ, ಅದನ್ನು ನೀಡಲಾಗುತ್ತದೆ.

ಬೆಳಗಿನ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರವೇಶಧನ ₹ 2 ರಿಂದ 3 ಸಾವಿರ ಇದ್ದರೆ, ಹೊತ್ತು ಇಳಿಯುತ್ತಾ, ಪ್ರವೇಶ ಧನದ ಪ್ರಮಾಣ ಏರುತ್ತದೆ. ಒಟ್ಟಾರೆ, ಇಡೀ ದಿನ ಸ್ಪರ್ಧೆ ನಡೆಯುತ್ತದೆ. ಎತ್ತುಗಳ ಮಾಲೀಕರು ಪ್ರವೇಶಶುಲ್ಕವನ್ನು ಸ್ಪರ್ಧೆ ಆಯೋಜಿಸುವ ಸಮಿತಿಗೆ ಪಾವತಿಸಿರುತ್ತಾರೆ.

40 ರಿಂದ 50 ಜೋಡೆತ್ತುಗಳು

ಪ್ರತಿ ಸ್ಪರ್ಧೆಯಲ್ಲಿ 40-50 ಜೋಡೆತ್ತುಗಳು ಭಾಗವಹಿಸುತ್ತವೆ. ಕನಿಷ್ಠ 25 ಜೋಡೆತ್ತುಗಳಂತೂ ಕಾಯಂ. ಸುತ್ತಲಿನ ಗ್ರಾಮ
ಗಳಷ್ಟೇ ಅಲ್ಲ, ಹೊರ ಜಿಲ್ಲೆಗಳಿಂದಲೂ ಬರುತ್ತಾರೆ. ಬೆಳಗಾವಿ, ಧಾರವಾಡ, ವಿಜಯಪುರದಲ್ಲಿ ನಡೆಯುವ ಸ್ಪರ್ಧೆಗಳಿಗೆ ಮಹಾರಾಷ್ಟ್ರದಿಂದಲೂ ರೈತರು ಭಾಗವಹಿಸುತ್ತಾರಂತೆ. ಸ್ಪರ್ಧಿಸುವವರ ಜತೆಗೆ, ಅವರನ್ನು ಹುರಿದುಂಬಿಸುವುದಕ್ಕೂ ಜನ ವಾಹನಗಳನ್ನು ಮಾಡಿಕೊಂಡು ಬರುತ್ತಾರಂತೆ.

ಸುಖ–ದುಃಖಗಳ ವಿನಿಮಯ

ಗಾಡಾ ಸ್ಪರ್ಧೆ ಕೇವಲ ಸ್ಪರ್ಧೆಯಷ್ಟೇ ಅಲ್ಲ, ಗ್ರಾಮಸ್ಥರ ನಡುವೆ ಬಾಂಧವ್ಯ ಬೆಸೆಯುವ ಕಾರ್ಯಕ್ರಮವೂ ಆಗಿದೆ. ಪ್ರತಿ ವರ್ಷ ಹೊಸ ಗೆಳೆಯರು ಪರಿಚಯವಾಗುತ್ತಾರೆ. ಆ ಪರಿಚಯದಲ್ಲಿ ಮಳೆ–ಬೆಳೆಗಳ ವಿಚಾರ ಬಂದು ಹೋಗುತ್ತವೆ. ಕೃಷಿ ಚಟುವಟಿಕೆಗಳು, ಹೊಸ ಪ್ರಯತ್ನಗಳು, ಬೆಳೆ, ತಳಿಗಳು ವಿನಿಮಯವಾಗುತ್ತವೆ.

ಸ್ಪರ್ಧೆಗಾಗಿ ಬಂದ ಪರ ಊರಿನ ರೈತರನ್ನು ಸ್ಥಳೀಯರು ಮನೆಗೆ ಕರೆದೊಯ್ದು, ಅತಿಥಿ ಸತ್ಕಾರ ಮಾಡುತ್ತಾರೆ. ಉತ್ತರ ಕರ್ನಾಕದ ಚಹಾ–ಚೂಡಾ ಆತಿಥ್ಯ ಇದ್ದೇ ಇರುತ್ತದೆ. ಅದರ ಜತೆಗೆ, ಸ್ಪರ್ಧೆ ವಿಕ್ಷಿಸುವಾಗ ಅಡಕಿ-ಎಲೆಯ ವಿನಿಮಯವೂ ನಡೆಯುತ್ತದೆ. ತಾಂಬೂಲ ಮೆಲ್ಲುತ್ತ, ಮಾಗಿಯ ಚಳಿ ಅನುಭವಿಸುತ್ತಾ, ಸ್ಪರ್ಧೆಯ ರಸದೌತಣ ಸವಿಯುತ್ತಾ, ಮುಂದಿನ ಸ್ಪರ್ಧೆ ಯಾವೂರಲ್ಲಿ ಎಂಬ ಚರ್ಚೆ ನಡೆಸುತ್ತಿರುತ್ತಾರೆ!

ಸ್ಪರ್ಧೆಗಾಗಿ ವಿಶೇಷ ‘ಗಾಡಾ’

ಗಾಡಾ – ನೋಡಲು ಗಾಡಿಯಂತೆ ಕಾಣುತ್ತದೆ.ಆದರೆ, ಅದನ್ನು ಸ್ಪರ್ಧೆಗಾಗಿ ವಿಶೇಷವಾಗಿ ತಯಾರಿಸಲಾಗಿರುತ್ತದೆ. ಇದಕ್ಕೆ ಎರಡುಚಕ್ರಗಳಿರುತ್ತವೆ. ಚಕ್ರಕ್ಕೆ ಕಬ್ಬಿಣ ಮತ್ತು ರಬ್ಬರಿನ ಅಚ್ಚು ಹಾಕಲಾಗಿರುತ್ತದೆ. ಉದ್ದಿಗೆ, ನೊಗ, ಡಂಬರಗಿ ಇರುತ್ತವೆ. ಅದಕ್ಕೆ ಅಲಂಕಾರವಾಗಿ ಪಟವನ್ನು ಕಟ್ಟಿರುತ್ತಾರೆ. ಒಂದು ತುದಿಯಿಂದ ಮತ್ತೊಂದು ತುದಿಗೆ ಗಾಡಾಗಳು ತಲುಪಿದ್ದಂತೆ, ಅವುಗಳಿಂದ ಎತ್ತುಗಳನ್ನು ಕಳಚುತ್ತಾರೆ. ಗುರಿ ತಲುಪಿದ ನಂತರ ಗಾಡಾಗಳನ್ನು ಟ್ರ್ಯಾಕ್ಟರ್‌ನ ಹುಕ್‌ ಹಾಕಿ ಎಳೆದುಕೊಂಡು, ಸ್ಪರ್ಧೆ ಆರಂಭಿಸುವ ತುದಿಗೆ ತಂದು ನಿಲ್ಲಿಸುತ್ತಾರೆ.

ಬಿಸಲಹಳ್ಳಿ ಸ್ಪರ್ಧೆ ತಯಾರಿ

‘ಸ್ಪರ್ಧೆ ಆಯೋಜಿಸುವ ಮುನ್ನವೇ ಬಿಸಲಹಳ್ಳಿಯ ಹೊಳಬಸವೇಶ್ವರ ದೇಗುಲದಲ್ಲಿ ಗ್ರಾಮಸ್ಥರು ಸಭೆ ಸೇರಿ ಸ್ಪರ್ಧೆಯ ಪೂರ್ವ ತಯಾರಿ ಬಗ್ಗೆ ಚರ್ಚಿಸಿದ್ದೆವು. ಉತ್ಸಾಹಿ ಯುವಕರಾದ ಮಲ್ಲೇಶಪ್ಪ ಕೊಳ್ಳಿ, ಬಸವನಗೌಡ್ರ ಗೌಡ್ರ, ಶಂಕ್ರು ಮುಚ್ಚಟ್ಟಿ, ಈಶಪ್ಪ ಮುಚ್ಚಟ್ಟಿ, ಬಸವರಾಜ ಕಾಕೋಳ, ಶಂಕರ ಜ್ಯೋತಿಯವರನ್ನೊಳಗೊಂಡ ತಂಡ ಪೂರ್ವಸಿದ್ಧತೆಗೆ ಕೈಜೋಡಿಸಿತು. ನಿಗದಿಯಾದ ದಿನದಂದು ಮುಂಜಾನೆ ಗ್ರಾಮದೇವರಿಗೆ ಹಾಗೂ ಅಖಾಡಕ್ಕೆ (ಭೂತಾಯಿಯನ್ನು ನಮಿಸಿದಂತೆ) ಪೂಜೆ ಸಲ್ಲಿಸಿದ ಕೂಡಲೇ ಸ್ಪರ್ಧೆ ಆರಂಭವಾಯಿತು. ತೀರ್ಪುಗಾರರಾಗಿ ಬಸವರಾಜ, ಹೇಮಂತ ಹಾಗೂ ಚೇತನ್ ಕಾರ್ಯನಿರ್ವಹಿಸಿದರು’ ಎಂದು ಗ್ರಾಮದ ಹಿರಿಯ ರೈತರಾದ ಶೇಖರಗೌಡ್ರ ಗೌಡ್ರ ಹಾಗೂ ಕುರುವತ್ತೇಪ್ಪ ಮುಚ್ಚಟ್ಟಿ ಸ್ಪರ್ಧೆ ಪೂರ್ವ ತಯಾರಿಯ ಶ್ರಮವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.