ADVERTISEMENT

ಯುರೋಪಿಯನ್‌ ಲೆಗ್‌ನ ಪ್ರೊ ಲೀಗ್ ಹಾಕಿ: ಅರ್ಜೆಂಟೀನಾಕ್ಕೆ ಮತ್ತೆ ಜಯ

ಕೊನೆಗಳಿಗೆಯಲ್ಲಿ ಪೆನಾಲ್ಟಿ ಅವಕಾಶದಲ್ಲಿ ಎಡವಿದ ಜುಗರಾಜ್

ಪಿಟಿಐ
Published 12 ಜೂನ್ 2025, 18:24 IST
Last Updated 12 ಜೂನ್ 2025, 18:24 IST
<div class="paragraphs"><p> ಹಾಕಿ ಲೀಗ್</p></div>

ಹಾಕಿ ಲೀಗ್

   

ಆಮ್‌ಸ್ಟಲ್ವೀನ್ (ನೆದರ್ಲೆಂಡ್ಸ್‌),: ಮುಕ್ತಾಯದ ಸೀಟಿ ಊದಲು ಎರಡೇ ನಿಮಿಷಗಳ  ಮೊದಲು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಭಾರತ ತಂಡ ‘ಪೆನಾಲ್ಟಿ’ ಅವಕಾಶ ವ್ಯರ್ಥ ಮಾಡಿಕೊಂಡಿದ್ದು ದುಬಾರಿಯಾಯಿತು. ಗುರುವಾರ ನಡೆದ ಎಫ್‌ಐಎಚ್‌ ಯುರೋಪಿಯನ್‌ ಲೆಗ್‌ನ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಅರ್ಜೆಂಟೀನಾ 2–1 ಗೋಲುಗಳಿಂದ ಭಾರತ ತಂಡವನ್ನು ಸೋಲಿಸಿತು.

ಇದು ಈ ಲೆಗ್‌ನಲ್ಲಿ ಭಾರತಕ್ಕೆ ಸತತ ನಾಲ್ಕನೇ ಸೋಲು. ಡ್ರ್ಯಾಗ್‌ ಫ್ಲಿಕ್ಕರ್ ಜುಗರಾಜ್ ಪಂದ್ಯದ ನಾಲ್ಕನೇ ನಿಮಿಷ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿದ್ದರು. ಆದರೆ ಥಾಮಸ್‌ ಡೊಮೆನ್ ಅವರು 9ನೇ ಮತ್ತು 49ನೇ ನಿಮಿಷ ಗೋಲುಗಳನ್ನು ಗಳಿಸಿ ತಂಡಕ್ಕೆ ಮುನ್ನಡೆ ನೀಡಿದರು.

ADVERTISEMENT

ಮುಕ್ತಾಯಕ್ಕೆ ಕೆಲವೇ ಕ್ಷಣಗಳಿರುವಾಗ ಭಾರತ ತಂಡಕ್ಕೆ ‘ಪೆನಾಲ್ಟಿ’ ಅವಕಾಶ ದೊರೆಯಿತು. ಆದರಲ್ಲಿ ಜುಗರಾಜ್ ಸಿಂಗ್ ಚೆಂಡನ್ನು ಗುರಿತಲುಪಿಸಿದ್ದರು ಕೂಡ. ಆದರೆ ಸ್ಟ್ರೋಕ್ ತೆಗೆದುಕೊಳ್ಳುವಾಗ ಜುಗರಾಜ್ ಎಡಗಾಲು ಚೆಂಡಿಗಿಂತ ಮುಂದಿತ್ತು ಎಂದು ಅರ್ಜೆಂಟೀನಾ ಆಟಗಾರರು ವಾದಿಸಿ ಮರುಪರಿಶೀಲನೆಗೆ ಕೋರಿದರು. ವಿಡಿಯೊ ಅಂಪೈರ್‌ ಅರ್ಜೆಂಟೀನಾ ಪರ ತೀರ್ಪು ನೀಡಿದರು. 

ಆದರೆ, ಜುಗರಾಜ್ ಸ್ಟ್ರೋಕ್ ತೆಗೆದುಕೊಳ್ಳುವ ಮುನ್ನವೇ ಅರ್ಜೆಂಟೀನಾ ಗೋಲ್‌ಕೀಪರ್‌ ಥಾಮಸ್‌ ಸಾಂಟಿಯಾಗೊ ಅವರು ಗೋಲುಗೆರೆಗಿಂತ ಮುಂದಡಿಯಿಟ್ಟಿದ್ದರು ಎಂದು ಭಾರತ ತಂಡದ ನಾಯಕತ್ವ ವಹಿಸಿದ್ದ ಹಾರ್ದಿಕ್ ಸಿಂಗ್ ಮನವಿ ಸಲ್ಲಿಸಿದರು. ಆಗ ಭಾರತದ ಪರ ತೀರ್ಪು ಬಂತು. ಜುಗರಾಜ್‌ಗೆ ಮತ್ತೊಮ್ಮೆ ಪೆನಾಲ್ಟಿ ತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಆದರೆ ಈ ಮರುಯತ್ನವನ್ನು ಸಾಂಟಿಯಾಗೊ ಚೆಂಡನ್ನು ಯಶಸ್ವಿಯಾಗಿ ತಡೆದರು.

ಕಾಯಂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಬೆರಳಿಗೆ ಗಾಯಗೊಂಡ ಪರಿಣಾಮ ಹಾರ್ದಿಕ್ ನಾಯಕತ್ವ ವಹಿಸಿದ್ದರು.

ಭಾರತ ಈ ಲೆಗ್‌ನಲ್ಲಿ, ಒಲಿಂಪಿಕ್‌ ಚಾಂಪಿಯನ್ ನೆದರ್ಲೆಂಡ್ಸ್ ಎದುರು ಎರಡು ಬಾರಿ ಸೋಲನುಭವಿಸಿತ್ತು. ಈಗ ಅರ್ಜೆಂಟೀನಾದ ಎದುರೂ ಎರಡು ಪಂದ್ಯಗಳಲ್ಲಿ ಸೋತಿದೆ. ಬುಧವಾರ ಅರ್ಜೆಂಟೀನಾ 4–3ರಿಂದ ಜಯಗಳಿಸಿತ್ತು.

ಭಾರತ ತನ್ನ ಮುಂದಿನ ಪಂದ್ಯ ಆಡಲು ಬೆಲ್ಜಿಯಂನ ಆ್ಯಂಟ‌್ವರ್ಪ್‌ಗೆ ತೆರಳಲಿದ್ದು, ಅಲ್ಲಿ ಶನಿವಾರ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.