ADVERTISEMENT

ಜುಲೈ 1ರಿಂದ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್

ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ತಾರೆಗಳ ತೋಟ; ನೂತನ ಟೂರ್ನಿಗೆ ವೇದಿಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:31 IST
Last Updated 4 ಜೂನ್ 2022, 19:31 IST
ಗ್ರ್ಯಾನ್‌ ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಟ್ರೋಫಿ ಮತ್ತು ತಂಡಗಳ ಜೆರ್ಸಿ ಬಿಡುಗಡೆ ಮಾಡಿದ ಪ್ರಚಾರ ರಾಯಭಾರಿಗಳು (ಎಡದಿಂದ ಬಲಕ್ಕೆ); ಅಶ್ವಿನಿ ಪೊನ್ನಪ್ಪ, ಸಾಯಿಪ್ರಣಿತ್, ಜ್ವಾಲಾ ಗುಟ್ಟಾ, ಪಿ.ವಿ. ಸಿಂಧು, ಕಿಡಂಬಿ ಶ್ರೀಕಾಂತ್, ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ, ಎಚ್‌.ಎಸ್. ಪ್ರಣಯ್, ಚಿರಾಗ್ ಶೆಟ್ಟಿ –ಪ್ರಜಾವಾಣಿ ಚಿತ್ರ
ಗ್ರ್ಯಾನ್‌ ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಟ್ರೋಫಿ ಮತ್ತು ತಂಡಗಳ ಜೆರ್ಸಿ ಬಿಡುಗಡೆ ಮಾಡಿದ ಪ್ರಚಾರ ರಾಯಭಾರಿಗಳು (ಎಡದಿಂದ ಬಲಕ್ಕೆ); ಅಶ್ವಿನಿ ಪೊನ್ನಪ್ಪ, ಸಾಯಿಪ್ರಣಿತ್, ಜ್ವಾಲಾ ಗುಟ್ಟಾ, ಪಿ.ವಿ. ಸಿಂಧು, ಕಿಡಂಬಿ ಶ್ರೀಕಾಂತ್, ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ, ಎಚ್‌.ಎಸ್. ಪ್ರಣಯ್, ಚಿರಾಗ್ ಶೆಟ್ಟಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕದ ಬ್ಯಾಡ್ಮಿಂ ಟನ್ ಕ್ರೀಡೆಯ ಶ್ರೀಮಂತ ಪರಂಪರೆಗೆ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್ ಲೀಗ್ ಸೇರಲಿದೆ.

ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಿಬಿಎಲ್ ನಲ್ಲಿ ಭಾಗವಹಿಸುವ ತಂಡಗಳ ಪೋಷಾಕು ಮತ್ತು ಟೂರ್ನಿಯ ಟ್ರೋಫಿಯನ್ನು ಬಿಡುಗಡೆ ಮಾಡಲಾಯಿತು.ಜುಲೈ 1ರಿಂದ ಹತ್ತು ದಿನಗಳವರೆಗೆ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಟೂರ್ನಿ ನಡೆಯಲಿದೆ. ಒಟ್ಟು ಎಂಟು ತಂಡಗಳು ಸ್ಪರ್ಧಿಸಲಿವೆ. ಈ ತಂಡಗಳಲ್ಲಿ ಆಡುವ ಆಟಗಾರರ ಆಯ್ಕೆಗಾಗಿ ಮುಂದಿನ ವಾರ ಬಿಡ್ ಪ್ರಕ್ರಿಯೆ ನಡೆಯಲಿದೆ. ಈ ತಂಡಗಳ ಪ್ರಚಾರ ರಾಯಭಾರಿಗಳಾದ ಪಿ.ವಿ. ಸಿಂಧು, ಕಿಡಂಬಿ ಶ್ರೀಕಾಂತ್, ಸಾಯಿ ಪ್ರಣೀತ್, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಚಿರಾಗ್ ಶೆಟ್ಟಿ, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಎಚ್‌.ಎಸ್. ಪ್ರಣಯ್ ಅವರು ಪೋಷಾಕುಗಳನ್ನು ಬಿಡುಗಡೆ ಮಾಡಿದರು.

ಟ್ರೋಫಿಯನ್ನು ಅನಾವರಣಗೊಳಿಸಿದ ಬೆಂಗಳೂರು ಲಯನ್ಸ್‌ ತಂಡದ ಸಹ ಮಾಲೀಕರೂ ಆಗಿರುವ ಒಲಿಂಪಿಯನ್ ಪಿ.ವಿ. ಸಿಂಧು, ‘ಈ ತರಹದ ಲೀಗ್‌ ಟೂರ್ನಿಗಳಿಂದ ಆಯಾ ಕ್ರೀಡೆಗಳ ಮೇಲೆ ಆಗಿರುವ ಪ್ರಭಾವವನ್ನು ನಾವು ನೋಡಿದ್ಧೇವೆ. ಇಂತಹ ವೇದಿಕೆಗಳಿಂದಲೇ ನೂತನ ಪ್ರತಿಭೆಗಳನ್ನು ಶೋಧ ಮಾಡಲು ಸಾಧ್ಯ. ಅವರನ್ನು ಪ್ರೋತ್ಸಾಹಿಸಿ ಭವಿಷ್ಯದ ತಾರೆಗಳನ್ನು ಬೆಳೆಸಲು ಸಾಧ್ಯ. ಜಿಪಿಬಿಎಲ್‌ನ ಭಾಗವಾಗಿರುವುದರಿಂದ ಅತ್ಯಂತ ಸಂತಸಗೊಂಡಿದ್ದೇನೆ’ ಎಂದರು.

ADVERTISEMENT

ಲೀಗ್ ನಿರ್ದೇಶಕರೂ ಆಗಿರುವ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅರವಿಂದ್ ಭಟ್ ಮಾತನಾಡಿ, ‘ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುವವರೆಗೂ ಹಣ ಗಳಿಕೆ ಸಾಧ್ಯವಿಲ್ಲ. ಆದರೆ ಆ ಮಟ್ಟಕ್ಕೆ ಏರಲು ಬಹಳಷ್ಟು ಹಣ ಖರ್ಚಾಗುತ್ತದೆ. ಇದರಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಈ ಕ್ರೀಡೆಯತ್ತ ಕಳಿಸಲು ಯೋಚಿಸುವಂತಾಗಿದೆ. ಜೂನಿಯರ್ ಮತ್ತು ಯೂತ್ ಹಂತದ ಪ್ರತಿಭೆಗಳಿಗೆ ಇಂತಹ ಲೀಗ್‌ಗಳಲ್ಲಿ ಅವಕಾಶ ಸಿಕ್ಕರೆ, ಒಂದಿಷ್ಟು ಹಣವೂ ಲಭಿಸುತ್ತದೆ’
ಎಂದರು.

ಟೂರ್ನಿಯ ಮಾದರಿ: ರೌಂಡ್‌ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿಯು ನಡೆಯಲಿದೆ. ಅಗ್ರ ನಾಲ್ಕು ತಂಡಗಳು ಡಬಲ್ ಎಲಿಮಿನೇಷನ್ ಹಂತ (ಸೆಮಿಫೈನಲ್) ಪ್ರವೇಶಿಸುತ್ತವೆ. ಗುಂಪು ವಿಭಾಗದಲ್ಲಿ ಪ್ರತಿ ತಂಡವೂ ಐದು ಪಂದ್ಯಗಳಲ್ಲಿ ಆಡಲಿದೆ. ಪುರುಷರ ಸಿಂಗಲ್ಸ್‌, ಮಹಿಳೆಯರ ಸಿಂಗಲ್ಸ್‌, ಮಿಶ್ರ ಡಬಲ್ಸ್‌, ಪುರುಷರ ಡಬಲ್ಸ್ ಮತ್ತು ಸೂಪರ್ ಮ್ಯಾಚ್ ಇರಲಿದೆ. ಇದರಲ್ಲಿ ಟ್ರಂಪ್ ಮ್ಯಾಚ್ ಕೂಡ ಇರಲಿದೆ.ತಂಡಗಳಿಗೆ ಆಟಗಾರರ ಆಯ್ಕೆಗಾಗಿ ಮುಂದಿನ ವಾರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ರಾಜ್ಯದ ಬೇರೆ ಬೇರೆ ಕಡೆಗಳಿಂದ 400 ಮಂದಿ ಹೆಸರು ನೋಂದಾಯಿಸಿಕೊಂಡಿದ್ಧಾರೆ. ಪ್ರತಿ ತಂಡದಲ್ಲಿಯೂ 10 ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳುವ ಅವಕಾಶ ಫ್ರ್ಯಾಂಚೈಸಿಗಳಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.