ADVERTISEMENT

ಚೆಸ್‌: ಮತ್ತೆ ಗೆದ್ದ ಹಾರಿಕ

ಪಿಟಿಐ
Published 6 ಮಾರ್ಚ್ 2020, 16:28 IST
Last Updated 6 ಮಾರ್ಚ್ 2020, 16:28 IST

ಲೂಸನ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್ ದ್ರೋಣವಳ್ಳಿ ಹಾರಿಕ ಅವರು ಫಿಡೆ ಮಹಿಳಾ ಗ್ರ್ಯಾನ್‌ ಪ್ರಿ ಚೆಸ್‌ ಟೂರ್ನಿಯಲ್ಲಿ ಮತ್ತೊಂದು ಗೆಲುವು ದಾಖಲಿಸಿದ್ದಾರೆ.

ಗುರುವಾರ ರಾತ್ರಿ ನಡೆದ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಹಾರಿಕ ಅವರು ಜಾರ್ಜಿಯಾದ ನ್ಯಾನಾ ಜಾಂಗಿಡ್ಜ್‌ ಅವರನ್ನು ಸೋಲಿಸಿದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು ಮೂರಕ್ಕೆ ಹೆಚ್ಚಿಸಿಕೊಂಡಿರುವ ಭಾರತದ ಆಟಗಾರ್ತಿ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್‌ಕಿನಾ ಅವರ ಖಾತೆಯಲ್ಲೂ ಇಷ್ಟೇ ಪಾಯಿಂಟ್ಸ್‌ ಇವೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಹಾರಿಕ, 27ನೇ ನಡೆಯಲ್ಲಿ ಎದುರಾಳಿಯನ್ನು ಸೋಲಿಸಿದರು.

ADVERTISEMENT

ಐದನೇ ಸುತ್ತಿನಲ್ಲಿ ಹಾರಿಕ ಮತ್ತು ಅಲೆಕ್ಸಾಂಡ್ರಾ ಮುಖಾಮುಖಿಯಾಗಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ 21 ವರ್ಷ ವಯಸ್ಸಿನ ಅಲೆಕ್ಸಾಂಡ್ರಾ‌‌, ಬಲ್ಗೇರಿಯಾದ ಆ್ಯಂಟೊನೆಟಾ ಸ್ಟೆಫಾನೊವಾ ವಿರುದ್ಧ ಜಯಿಸಿದರು.

ಕಜಕಸ್ತಾನದ ಝಾನಸಯಾ ಅಬ್ದುಮಲಿಕ್‌ ಅವರು ರ‍್ಯಾಂಕಿಂಗ್‌ನಲ್ಲಿ ತನಗಿಂತಲೂ ಮೇಲಿರುವ ಅಲೆಕ್ಸಾಂಡ್ರಾ ಕೊಸ್ತೆನಿವುಕ್‌ಗೆ ಆಘಾತ ನೀಡಿದರು.

ಜಾಣ್ಮೆಯಿಂದ ಕಾಯಿಗಳನ್ನು ಮುನ್ನಡೆಸಿದ ಝಾನಸಯಾ 37ನೇ ನಡೆಯಲ್ಲಿ ರಷ್ಯಾದ ಆಟಗಾರ್ತಿಯನ್ನು ಸೋಲಿಸಿದರು.

ವಿಶ್ವ ಚಾಂಪಿಯನ್‌ ಜು ವೆಂಜುನ್‌ ಅವರು ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಉಕ್ರೇನ್‌ನ ಆ್ಯನಾ ಮುಝಿಚುಕ್‌ ವಿರುದ್ಧ ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.