ADVERTISEMENT

ಪಂದ್ಯ ಸೋತದ್ದಕ್ಕೆ ತಲೆ ಬೋಳಿಸುವ ಶಿಕ್ಷೆ!

ಕೋಚ್‌ ವಿರುದ್ಧ ತನಿಖೆಗೆ ಮೂವರ ಸಮಿತಿ ನೇಮಕ ಮಾಡಿದ ಬಂಗಾಳ ಹಾಕಿ ಸಂಸ್ಥೆ

ಪಿಟಿಐ
Published 21 ಜನವರಿ 2019, 17:55 IST
Last Updated 21 ಜನವರಿ 2019, 17:55 IST

ಕೋಲ್ಕತ್ತ: ಪಂದ್ಯವೊಂದರಲ್ಲಿ ಸೋತದ್ದಕ್ಕೆ ಆಟಗಾರರಿಗೆ ತಲೆ ಬೋಳಿಸುವ ‘ಶಿಕ್ಷೆ’ ನೀಡಿ ಬಂಗಾಳದ 19 ವರ್ಷದೊಳಗಿನವರ ಹಾಕಿ ಕೋಚ್‌ ವಿವಾದಕ್ಕೆ ಒಳಗಾಗಿದ್ದಾರೆ. ಈ ಕುರಿತು ಬಂಗಾಳ ಹಾಕಿ ಸಂಸ್ಥೆ ತನಿಖೆಗೆ ಮುಂದಾಗಿದ್ದು ಮೂವರ ಸಮಿತಿಯನ್ನು ನೇಮಕ ಮಾಡಿದೆ.

ಈ ವಿಷಯವನ್ನು ಸಂಸ್ಥೆಯ ಕಾರ್ಯದರ್ಶಿ ಸ್ವ‍ಪನ್ ಬ್ಯಾನರ್ಜಿ ದೃಢಪಡಿಸಿದ್ದು ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ತಿಳಿಸಿದರು.

ಜಬಲ್‌ಪುರದಲ್ಲಿ ನಡೆದಿದ್ದ ರಾಷ್ಟ್ರೀಯ ಜೂನಿಯರ್ ‘ಬಿ’ ಡಿವಿಷನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ನಾಮಧಾರಿ ಇಲೆವನ್‌ ತಂಡದ ವಿರುದ್ಧ ಬಂಗಾಳ 1–5ರಲ್ಲಿ ಸೋತಿತ್ತು. ಪಂದ್ಯದ ಮೊದಲಾರ್ಧ ಮುಕ್ತಾಯಗೊಂಡಾಗ ಸೋಲಿನ ಆತಂಕದಲ್ಲಿದ್ದ ತಂಡದ ಕೋಚ್‌ ಆನಂದ ಕುಮಾರ್‌ ‘ಸೋತರೆ ತಲೆ ಬೋಳಿಸಬೇಕಾದೀತು’ ಎಂದು ಆಟಗಾರರನ್ನು ಬೆದರಿಸಿದ್ದರು.

ADVERTISEMENT

ಪಂದ್ಯ ಮುಗಿಸಿ ವಾಪಸಾದ ನಂತರ ಕೆಲವರು ತಾವಾಗಿಯೇ ತಲೆ ಬೋಳಿಸಿಕೊಂಡರೆ, ಕೆಲವರನ್ನು ಒತ್ತಾಯಪೂರ್ವಕವಾಗಿ ‘ಶಿಕ್ಷೆ’ಗೆ ಗುರಿಪಡಿಸಲಾಗಿದೆ. ಒಟ್ಟು 18 ಮಂದಿಯ ಪೈಕಿ ಇಬ್ಬರು ಮಾತ್ರ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಂಡದಲ್ಲಿದ್ದವರ ಪೈಕಿ 12 ಮಂದಿ ಸಾಲ್ಟ್ ಲೇಕ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಪೂರ್ವ ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ಪಂದ್ಯದ ಮಧ್ಯದಲ್ಲಿ ಹಾಗೆ ಹೇಳಿದ್ದು ನಿಜ. ಆದರೆ ಸೋತು ವಾಪಸಾದ ನಂತರ ಮಾತನಾಡಲಿಲ್ಲ. ತಲೆ ಬೋಳಿಸುವಂತೆ ನಾನು ಯಾಕೆ ಒತ್ತಾಯಿಸಲಿ’ ಎಂದು ಹೇಳಿರುವ ಆನಂದ ಕುಮಾರ್, ‘ವಾಸ್ತವದಲ್ಲಿ ಏನು ನಡೆದಿದೆ ಎಂಬುದನ್ನು ಆಟಗಾರರ ಜೊತೆ ಮಾತನಾಡಿ ತಿಳಿಯುವೆ’ ಎಂದರು. ಆಟಗಾರರ ಜೊತೆ ಮಾತನಾಡುವುದಾಗಿ ಸಾಯ್ ನಿರ್ದೇಶಕ ಮನಮೀತ್ ಸಿಂಗ್ ಗೊಯಿಂಡಿ ಅವರೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.