ADVERTISEMENT

ಹಾಕಿ: ಐಒಸಿಎಲ್‌ಗೆ ಭಾರಿ ಜಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST
ಗೋಲು ಗಳಿಸಿದ ಅಫಾನ್ ಯೂಸುಫ್ ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಬಿ.ಕೆ.ಜನಾರ್ದನ್‌
ಗೋಲು ಗಳಿಸಿದ ಅಫಾನ್ ಯೂಸುಫ್ ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಬಿ.ಕೆ.ಜನಾರ್ದನ್‌   

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್‌) ತಂಡ ಇಲ್ಲಿ ನಡೆಯುತ್ತಿರುವ ಬೆಂಗಳೂರು ಹಾಕಿ ಸೂಪರ್ ಡಿವಿಷನ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನಕ್ಕೇರಿತು. ಸೋಮವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಐಒಸಿಎಲ್ 7–2ರಲ್ಲಿ ಬೆಂಗಳೂರು ಯುನೈಟೆಡ್ ಹಾಕಿ ಕ್ಲಬ್‌ (ಬಿಯುಎಚ್‌ಸಿ) ಎದುರು ಗೆದ್ದಿತು.

ಐಒಸಿಎಲ್‌ ಪರ ಅಫಾನ್ ಯೂಸುಫ್ ಮೂರು ಮತ್ತು ರೋಷನ್ ಮಿನ್ಜ್‌ ಎರಡು ಗೋಲು ಗಳಿಸಿದರು. ವಿ.ಆರ್.ರಘುನಾಥ್ ಮತ್ತು ಗುರ್ಜಿಂದರ್ ಸಿಂಗ್‌ ತಲಾ ಒಂದೊಂದು ಗೋಲು ಗಳಿಸಿದರು. ಎದುರಾಳಿ ತಂಡದ ಪರ ಹರ್‌ಸಾಹಿಬ್ ಶಮಿ ಮತ್ತು ಜೋಗಿಂದರ್ ಸಿಂಗ್‌ ಚೆಂಡನ್ನು ಗುರಿ ಮುಟ್ಟಿಸಿದರು.

ಈ ಪಂದ್ಯದ ಮುಕ್ತಾಯದ ನಂತರ ಉಭಯ ತಂಡಗಳ ಖಾತೆಯಲ್ಲಿ ತಲಾ 10 ಪಾಯಿಂಟ್‌ ಸೇರಿದವು. ಆದರೆ ಗೋಲು ಗಳಿಕೆಯ ಆಧಾರದಲ್ಲಿ ಐಒಸಿಎಲ್‌ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು. ಇಂಡಿಯನ್ ನೇವಿ ತಂಡ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿತು.

ADVERTISEMENT

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ಜಯಭೇರಿ: ‘ಬಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ (ಪಿಎನ್‌ಬಿ) ತಂಡ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ತಂಡವನ್ನು 5–2ರಲ್ಲಿ ಮಣಿಸಿತು. ದಿವಾಕರ್ ರಾಮ್ ಗಳಿಸಿದ ಗೋಲಿನ ಮೂಲಕ ಒಎನ್‌ಜಿಸಿ ಮುನ್ನಡೆ ಸಾಧಿಸಿತು. ಆದರೆ ಇಂದರ್ ಪಾಲ್ ಸಿಂಗ್‌ ಮತ್ತು ಗಗನ್‌ ದೀಪ್ ಸಿಂಗ್ ತಿರುಗೇಟು ನೀಡಿದ ಪಿಎನ್‌ಬಿಗೆ ಮುನ್ನಡೆ ಗಳಿಸಿಕೊಟ್ಟರು.

ಮನ್‌ದೀಪ್‌ ಅಂಟಿಲ್ ಅವರ ಗೋಲಿನ ಮೂಲಕ ಒಎನ್‌ಜಿಸಿ ಮತ್ತೆ ಸಮಬಲ ಸಾಧಿಸಿತು. ನಂತರ ಪೂರ್ಣ ಆಧಿಪತ್ಯ ಸ್ಥಾಪಿಸಿದ ಪಿಎನ್‌ಬಿ ಸುಮಿತ್ ಟೊಪ್ಪೊ, ಅಭಿಷೇಕ್‌ ಮತ್ತು ಸತೇಂದರ್‌ ದಲಾಲ್ ಗಳಿಸಿದ ಗೋಲುಗಳ ಮೂಲಕ ಗೆಲುವು ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.