ADVERTISEMENT

ಅಮೆರಿದಲ್ಲಿ ಸಿಲುಕಿರುವ ಹಾಕಿ ಆಟಗಾರ ಅಶೋಕ್ ದಿವಾನ್

ಪಿಟಿಐ
Published 9 ಏಪ್ರಿಲ್ 2020, 19:42 IST
Last Updated 9 ಏಪ್ರಿಲ್ 2020, 19:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಒಲಿಂಪಿಯನ್ ಮತ್ತು 1975ರ ವಿಶ್ವಕಪ್ ಹಾಕಿ ಟೂರ್ನಿಯ ಪ್ರಶಸ್ತಿ ವಿಜೇತ ಭಾರತ ತಂಡದ ಸದಸ್ಯ ಅಶೋಕ್ ದಿವಾನ್ ಅವರು ಕೊರೊನಾ ಹಾವಳಿಯಿಂದ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯಿಂದಾಗಿ ಅಮೆರಿಕದಲ್ಲಿ ಸಿಲುಕಿದ್ದಾರೆ. ಆರೋಗ್ಯ ಹದಗೆಟ್ಟಿರುವ ಅವರು ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ಅಮೆರಿಕದಲ್ಲೇ ಇರಬೇಕಾಗಿದ್ದು ವೈದ್ಯಕೀಯ ವೆಚ್ಚಕ್ಕೆ ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟವರ ಮೊರೆ ಹೋಗಿದ್ದಾರೆ.

65 ವರ್ಷ ವಯಸ್ಸಿನ ಅಶೋಕ್ ದಿವಾನ್ ಅವರ ಆರೋಗ್ಯ ಹದಗೆಡುತ್ತಿದ್ದು ಗುರುವಾರ ಭಾರತ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ನರಿಂದರ್ ಬಾತ್ರಾ ಅವರಿಗೆ ಕರೆ ಮಾಡಿ ತಮ್ಮ ನೋವನ್ನು ಸರ್ಕಾರಕ್ಕೆ ಮುಟ್ಟಿಸಬೇಕು ಎಂದು ಕೋರಿದ್ದಾರೆ.

‘ಕ್ಯಾಲಿಫೋರ್ನಿಯಾದ ಆಸ್ಪತ್ರೆಯಲ್ಲಿ ಕಳೆದ ವಾರ ದಾಖಲಾಗಬೇಗಿತ್ತು. ಅದು ಸಾಧ್ಯವಾಗಲಿಲ್ಲ. ದಿನಗಳೆದಂತೆ ಆರೋಗ್ಯ ಹದಗೆಡುತ್ತಿದೆ. ವೈದ್ಯಕೀಯ ವೆಚ್ಚ ಬಹಳ ಹೆಚ್ಚಾಗಿದ್ದು ವಿಮೆಯೂ ಇಲ್ಲ. ಏರ್ ಇಂಡಿಯಾ ವಿಮಾನದಲ್ಲಿ ಏಪ್ರಿಲ್ 20ರಂದು ಭಾರತಕ್ಕೆ ವಾಪಸಾಗಲು ಸಿದ್ಧನಾಗಿದ್ದೆ. ಆದರೆ ಕೊರೊನಾ ಹಾವಳಿಯಿಂದಾಗಿ ಸದ್ಯ ಪ್ರಯಾಣ ಮಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ’ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷರೂ ಆಗಿರುವ ಬಾತ್ರಾಗೆ ಅಶೋಕ್ ತಿಳಿಸಿದ್ದಾರೆ.

ADVERTISEMENT

‘ನನ್ನ ಮನವಿಯನ್ನು ಕೇಂದ್ರ ಕ್ರೀಡಾ ಸಚಿವರಿಗೆ ಮತ್ತು ವಿದೇಶಾಂಗ ಸಚಿವರಿಗೆ ತಲುಪಿಸಬೇಕು. ನನ್ನ ಆಸ್ಪತ್ರೆ ವೆಚ್ಚಕ್ಕೆ ಸಂಬಂಧಿಸಿ ಸಹಾಯ ಮಾಡಲು ಕೋರಬೇಕು. ಭಾರತಕ್ಕೆ ಮರಳಿದ ನಂತರ ಎಲ್ಲ ರಶೀದಿಗಳನ್ನು ಒಪ್ಪಿಸುವೆ’ ಎಂದು ಅಶೋಕ್ ಮನವಿ ಮಾಡಿದ್ದಾರೆ.

1976ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತ ತಂಡದಲ್ಲಿದ್ದ ಅಶೋಕ್ ಸಾಕ್ರಿಮೆಂಟೊದಲ್ಲಿರುವ ಮಗನ ಜೊತೆ ಕಳೆಯಲು ಕಳೆದ ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ತೆರಳಿದ್ದರು.

‘ನನ್ನಅವಿವಾಹಿತ ಸಹೋದರನ ಜೊತೆ ಇರಲು ತಂದೆ ಹೋಗಿದ್ದರು. ಸ್ವಲ್ಪ ದಿನಗಳಲ್ಲೇ ಅನಾರೋಗ್ಯ ಕಾಡಿತು. ಹೀಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯಕೀಯ ತಪಾಸಣೆಗಳನ್ನು ನಡೆಸಿದಾಗ ಹೃದ್ರೋಗ ಇರುವುದು ಖಾತರಿಯಾಗಿತ್ತು. ಒಂದು ತಿಂಗಳ ಔಷಧಿ ನೀಡಿದರೂ ಪ್ರಯೋಜನವಾಗಲಿಲ್ಲ’ ಎಂದು ಅಶೋಕ್ ಅವರಮಗಳು ಆರುಶಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.