ADVERTISEMENT

ಟೈ ಪಂದ್ಯದಲ್ಲಿ ಬೆಂಗಳೂರು ರೈನೊಸ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:21 IST
Last Updated 2 ಜೂನ್ 2019, 19:21 IST
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಪಂದ್ಯಾಟದಲ್ಲಿ ಬೆಂಗಳೂರು ರೈನೋಸ್ ತಂಡದ ಸಂದೀಪ್‌ ಕುಮಾರ್ ಅವರನ್ನು ಚೆನ್ನೈ ಚಾಲೆಂಜರ್ಸ್ ತಂಡದ ಆಟಗಾರರು ಹಿಡಿದ ಕ್ಷಣ – ಪ್ರಜಾವಾಣಿ ಚಿತ್ರ / ಇರ್ಷಾದ್ ಮಹಮ್ಮದ್‌
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಪಂದ್ಯಾಟದಲ್ಲಿ ಬೆಂಗಳೂರು ರೈನೋಸ್ ತಂಡದ ಸಂದೀಪ್‌ ಕುಮಾರ್ ಅವರನ್ನು ಚೆನ್ನೈ ಚಾಲೆಂಜರ್ಸ್ ತಂಡದ ಆಟಗಾರರು ಹಿಡಿದ ಕ್ಷಣ – ಪ್ರಜಾವಾಣಿ ಚಿತ್ರ / ಇರ್ಷಾದ್ ಮಹಮ್ಮದ್‌   

ಬೆಂಗಳೂರು: ಬೆಂಗಳೂರು ರೈನೋಸ್ ಮತ್ತು ಚೆನ್ನೈ ಚಾಲೆಂಜರ್ಸ್‌ ತಂಡಗಳು ಭಾನುವಾರ ಇಲ್ಲಿ ನಡೆದ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯ ಇಂಟರ್‌ ಝೋನ್‌ ಪಂದ್ಯದಲ್ಲಿ ಟೈ ಸಾಧಿಸಿದವು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 'ಎ' ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಬೆಂಗಳೂರು ರೈನೋಸ್‌ 'ಬಿ' ಗುಂಪಿನಲ್ಲಿ ಅದೇ ಸ್ಥಾನದಲ್ಲಿರುವ ಚೆನ್ನೈ ಚಾಲೆಂಜರ್ಸ್‌ ವಿರುದ್ಧ 43-43 ಅಂಕಗಳ ಸಮಬಲ ಸಾಧಿಸಿತು. ಈಗಾಗಲೇ ಸೆಮಿಫೈನಲ್ಸ್‌ ಸ್ಥಾನ ಖಾತ್ರಿ ಪಡಿಸಿಕೊಂಡಿದ್ದರಿಂದ, ಈ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದೊಂದಿಗೆ ನಾಕ್‌ಔಟ್‌ಗೆ ಕಾಲಿಡುವ ಪ್ರಯತ್ನ ನಡೆಸಿದವು. ಆದರೆ, ವಿಜಯಲಕ್ಷ್ಮೀ ಎರಡೂ ತಂಡಗಳಿಗೆ ಒಲಿಯಲಿಲ್ಲ.

ಇದರೊಂದಿಗೆ 'ಎ' ಗುಂಪಿನಲ್ಲಿ ಆಡಿದ 10 ಪಂದ್ಯಗಳಲ್ಲಿ ತಲಾ ನಾಲ್ಕು ಸೋಲು ಮತ್ತು ಗೆಲುವು ಹಾಗೂ ಮತ್ತೆರಡು ಪಂದ್ಯಗಳಲ್ಲಿ ಟೈ ಫಲಿತಾಂಶ ಕಂಡಿರುವ ಬೆಂಗಳೂರು ತಂಡ ಒಟ್ಟು 12 ಅಂಕಗಳೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಮುನ್ನಡೆದಿದೆ. ಮತ್ತೊಂದೆಡೆ ಚೆನ್ನೈ ಚಾಲೆಂಜರ್ಸ್‌ ಕೂಡ ಅಷ್ಟೇ ಪಂದ್ಯಗಳನ್ನಾಡಿ ಅಷ್ಟೇ ಅಂಕಗಳನ್ನು ಗಳಿಸಿ 'ಬಿ' ಗುಂಪಿನಿಂದ ನಾಕ್‌ಔಟ್‌ಗೆ ಸಾಗಿದೆ.

ADVERTISEMENT

ಸೋಲಿನ ಸುಳಿಯಲ್ಲಿದ್ದ ಚೆನ್ನೈ ಚಾಲೆಂಜರ್ಸ್‌ ತಂಡ ಅಂತಿಮ ಕ್ವಾರ್ಟರ್‌ನಲ್ಲಿ ಅಚ್ಚರಿಯ ರೀತಿಯಲ್ಲಿ 18-8 ಅಂಕಗಳಿಂದ ರೈನೋಸ್‌ ಪಡೆಯನ್ನು ಹಿಮ್ಮೆಟ್ಟಿಸಿ ಸೋಲು ತಪ್ಪಿಸಿ ಕೊಂಡಿತು. ಚಾಲೆಂಜರ್ಸ್‌ ತಂಡದ ಪರ ಆಲ್‌ರೌಂಡ್‌ ಆಟವಾಡಿದ ರಾಜೇಶ್‌ ಧಿಮಾನ್‌ ಒಟ್ಟಾರೆ 15 ಅಂಕಗಳನ್ನು ದಾಖಲಿಸಿ ಚೆನ್ನೈಗೆ ಎದುರಾಗಬೇಕಿದ್ದ ಸೋಲನ್ನು ತಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.