ADVERTISEMENT

ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿ: ಸೆಮಿಫೈನಲ್ ಹಾದಿಯಲ್ಲಿ ಬೆಲ್ಜಿಯಂ ಸವಾಲು

ಭಾರತಕ್ಕೆ ಫಾರ್ವರ್ಡ್ ಆಟಗಾರರ ಮೇಲೆ ಭರವಸೆ

ಪಿಟಿಐ
Published 30 ನವೆಂಬರ್ 2021, 14:29 IST
Last Updated 30 ನವೆಂಬರ್ 2021, 14:29 IST
ಭಾರತದ ಯುವ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ –ಎಫ್‌ಐಎಚ್‌ ವೆಬ್‌ಸೈಟ್ ಚಿತ್ರ
ಭಾರತದ ಯುವ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ –ಎಫ್‌ಐಎಚ್‌ ವೆಬ್‌ಸೈಟ್ ಚಿತ್ರ   

ಭುವನೇಶ್ವರ: ಸತತ ಎರಡು ಜಯದ ನಂತರ ಚೇತರಿಸಿಕೊಂಡಿರುವ ಭಾರತ ತಂಡ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬುಧವಾರ ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಫಾರ್ವರ್ಡ್ ವಿಭಾಗ ಮತ್ತು ಡ್ರ್ಯಾಗ್ ಫ್ಲಿಕ್ಕರ್‌ಗಳ ಮೇಲೆ ಭಾರತ ತಂಡ ಭರವಸೆ ಇರಿಸಿಕೊಂಡಿದೆ.

ಹಾಲಿ ಚಾಂಪಿಯನ್ ಭಾರತ ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ತಂಡಗಳಲ್ಲಿ ಒಂದೆನಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4–5ರ ಸೋಲಿನಿಂದಾಗಿ ಆತಂಕಕ್ಕೆ ಒಳಗಾಗಿದ್ದ ತಂಡ ನಂತರ ಕೆನಡಾವನ್ನು 13–1ರಲ್ಲಿ ಮಣಿಸಿ ಲಯಕ್ಕೆ ಮರಳಿತ್ತು. ಪೋಲೆಂಡ್‌ಗೆ 8–2ರಲ್ಲಿ ಸೋಲುಣಿಸಿ ಆತ್ಮವಿಶ್ವಾಸ ಗಳಿಸಿತ್ತು. ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸುವುದರೊಂದಿಗೆ ನಾಕೌಟ್ ಹಂತ ಪ್ರವೇಶಿಸಿತ್ತು.

ಈಗ ತಂಡಕ್ಕೆ ನಿಜವಾದ ಸವಾಲು ಎದುರಾಗಿದೆ. ಮೂರನೇ ಬಾರಿ ಪ್ರಶಸ್ತಿ ಗದ್ದುಕೊಳ್ಳಬೇಕಾದರೆ ತಂಡ ಉಳಿದ ಎಲ್ಲ ಪಂದ್ಯಗಳನ್ನೂ ಗೆಲ್ಲಬೇಕಾಗಿದೆ. ಬೆಲ್ಜಿಯಂ ಎದುರಿನ ಎಂಟರ ಘಟ್ಟದ ಪಂದ್ಯವು ಕಳೆದ ಬಾರಿಯ ಫೈನಲ್ ಪಂದ್ಯದ ಪುನರಾವರ್ತನೆಯಂತಾಗಲಿದೆ. ಆ ಪಂದ್ಯದಲ್ಲಿ ಭಾರತ 2–1ರಲ್ಲಿ ಜಯ ಸಾಧಿಸಿತ್ತು.

ADVERTISEMENT

ಪ್ರತೀಕಾರ ತೀರಿಸಲು ಕಾಯುತ್ತಿರುವ ಬೆಲ್ಜಿಯಂ ಬುಧವಾರ ತನ್ನೆಲ್ಲ ಸಾಮರ್ಥ್ಯವನ್ನು ತೋರಿ ಆಡಲು ಮುಂದಾಗುವ ಸಾಧ್ಯತೆ ಇದೆ. ಆದ್ದರಿಂದ ಪಂದ್ಯ ರೋಚಕವಾಗುವುದು ಖಚಿತ. ಉತ್ತಮ್ ಸಿಂಗ್‌, ಅರಿಜೀತ್ ಸಿಂಗ್ ಹುಂದಾಲ್‌, ಸಂದೀಪ್ ಚಿರ್ಮಾಕೊ ಮತ್ತು ಮಣಿಂದರ್ ಸಿಂಗ್ ಅವರು ಭಾರತ ತಂಡದ ಆಧಾರವಾಗಿದ್ದು ಶ್ರದ್ಧಾನಂದ ತಿವಾರಿ, ಅಭಿಷೇಕ್ ಲಾಕ್ರ, ನಾಯಕ ವಿವೇಕ್ ಸಾಗರ್‌ ಪ್ರಸಾದ್‌ ಮತ್ತಿರರ ಮೇಲೆಯೂ ನಿರೀಕ್ಷೆ ಇದೆ.

ಮುಖಾಮುಖಿ

ಪಂದ್ಯಗಳು 24

ಭಾರತ ಜಯ 8

ಬೆಲ್ಜಿಯಂ ಜಯ 14

ಡ್ರಾ 2

ಮುಖಾಮುಖಿಯಲ್ಲಿ ಗೋಲು

ಬೆಲ್ಜಿಯಂ 54

ಭಾರತ 45

ಆರಂಭ: ರಾತ್ರಿ 7.30

ನೇರ ಪ್ರಸಾರ: watch.hockey

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.