ADVERTISEMENT

ಏಷ್ಯಾ ಕಪ್ ಹಾಕಿ ಟೂರ್ನಿ: ಜಪಾನ್ ವಿರುದ್ಧ ಪುಟಿದೆದ್ದ ಭಾರತ

ಗೋಲು ಗಳಿಸಿದ ಮಂಜೀತ್‌, ಪವನ್ ರಾಜಭರ್‌

ಪಿಟಿಐ
Published 28 ಮೇ 2022, 15:21 IST
Last Updated 28 ಮೇ 2022, 15:21 IST
ಭಾರತದ ಆಟಗಾರನಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ ಜಪಾನ್ ತಂಡದವರು –ಹಾಕಿ ಇಂಡಿಯಾ ಚಿತ್ರ
ಭಾರತದ ಆಟಗಾರನಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ ಜಪಾನ್ ತಂಡದವರು –ಹಾಕಿ ಇಂಡಿಯಾ ಚಿತ್ರ   

ಜಕಾರ್ತ: ಎರಡು ಅಮೋಘ ಫೀಲ್ಡ್‌ಗೋಲುಗಳನ್ನು ಗಳಿಸಿದ ಭಾರತ ತಂಡ ಏಷ್ಯಾಕಪ್ ಹಾಕಿ ಟೂರ್ನಿಯ ಸೂಪರ್–4ರ ಹಂತದ ಮೊದಲ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು. ಶನಿವಾರ ನಡೆದ ಹಣಾಹಣಿಯಲ್ಲಿ ಜಪಾನ್ ತಂಡವನ್ನು ಭಾರತ 2–1ರಲ್ಲಿ ಮಣಿಸಿತು. ಈ ಮೂಲಕ ಗುಂಪು ಹಂತದಲ್ಲಿ ಅನುಭವಿಸಿದ್ದ ಸೋಲಿಗೆ ಪ್ರತೀಕಾರ ತೀರಿಸಿತು.

ಪಂದ್ಯದ ಆರಂಭದ ಕೆಲವು ನಿಮಿಷ ಜಪಾನ್ ಆಧಿಪತ್ಯ ಸ್ಥಾಪಿಸಿತು. ಮೊದಲನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ಗಳಿಸಿಕೊಂಡಿತ್ತು. ಐದು ನಿಮಿಷಗಳ ನಂತರ ಭಾರತ ಆಕ್ರಮಣ ಹೆಚ್ಚಿಸಿತು. ಆದರೆ ಎದುರಾಳಿ ತಂಡದ ರಕ್ಷಣಾ ವಿಭಾಗ ಸಮರ್ಥ ಉತ್ತರ ನೀಡಿತು.

8ನೇ ನಿಮಿಷದಲ್ಲಿ ಮಂಜೀತ್ ಗಳಿಸಿದ ಸುಂದರ ಗೋಲಿನೊಂದಿಗೆ ಭಾರತ ಮುನ್ನಡೆ ಸಾಧಿಸಿತು. ಪವನ್ ರಾಜ್‌ಭರ್‌ ಅವರಿಂದ ಪಾಸ್ ಪಡೆದು ಎಡಭಾಗದಲ್ಲಿ ಚೆಂಡನ್ನು ನಿಯಂತ್ರಿಸಿದ ಅವರು ಏಕಾಂಗಿಯಾಗಿ ಮುನ್ನುಗ್ಗಿದರು. ನಾಲ್ವರು ಡಿಫೆಂಡರ್‌ಗಳನ್ನು ವಂಚಿಸಿ ಮುಂದೆ ಸಾಗಿದ ಅವರು ಮಿಂಚಿನ ವೇಗದಲ್ಲಿ ಗುರಿಮುಟ್ಟಿಸಿದರು. ಗೋಲ್‌ಕೀಪರ್ ಟಕಶಿ ಯೊಶಿಕವ ನೋಡುತ್ತಿದ್ದಂತೆಯೇ ಚೆಂಡು ಗೋಲುಪೆಟ್ಟಿಗೆಯ ಒಳಗೆ ಸೇರಿತು.

ADVERTISEMENT

13ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ನೀಲಂ ಸಂಜೀವ್ ಕ್ಸೆಸ್ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. 18ನೇ ನಿಮಿಷದಲ್ಲಿ ತಾಕುಮಾ ನಿವಾ ಗೋಲು ಗಳಿಸಿ ಜಪಾನ್‌ಗೆ ಸಮಬಲ ಗಳಿಸಿಕೊಟ್ಟರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಕೆನ್ ನಗಯೋಶಿ ಅವರ ಫ್ಲಿಕ್ ಯಶಸ್ಸು ಕಾಣಲಿಲ್ಲ. ಗೋಲ್‌ ಕ್‌ಕೀಪರ್ ಸೂರಜ್ ಕರ್ಕೇರಾ ಅವರ ಸ್ಟಿಕ್‌ಗೆ ಬಡಿದು ವಾಪಸಾದ ಚೆಂಡನ್ನು ತಾಕುಮಾ ಸುಲಭವಾಗಿ ಗುರಿಯತ್ತ ತಳ್ಳಿದರು.

ನಂತರ ಜಪಾನ್‌ ತಂಡ ಪ್ರಬಲ ಆಕ್ರಮಣಕ್ಕೆ ಮುಂದಾಯಿತು. ಹೀಗಾಗಿ ಸತತ ಎರಡು ಪೆನಾಲ್ಟಿ ಕಾರ್ನರ್‌ಗಳು ಆ ತಂಡಕ್ಕೆ ಲಭಿಸಿದವು. ಆದರೆ ಭಾರತದ ರಕ್ಷಣಾ ವಿಭಾಗ ಬಲಿಷ್ಠವಾಗಿ ನಿಂತು ತಡೆಯೊಡ್ಡಿತು. ಈ ನಡುವೆ ಕಾರ್ತಿ ಸೆಲ್ವಂ ಅವರು ಚಿನ್ನದಂಥ ಅವಕಾಶವನ್ನು ಕೈಚೆಲ್ಲಿದರು. 35ನೇ ನಿಮಿಷದಲ್ಲಿ ಪವನ್ ರಾಜಭರ್‌ ಅವರು ಭಾರತವನ್ನು ಮತ್ತೆ ಮುನ್ನಡೆಯ ಹಾದಿಯಲ್ಲಿ ನಡೆಸಿದರು. ಉತ್ತಮ್ ಸಿಂಗ್ ಚಾಣಾಕ್ಷತನ ಮೆರೆದು ತಂದುಕೊಟ್ಟ ಚೆಂಡನ್ನು ಪವನ್ ಮಿಂಚಿನ ವೇಗದಲ್ಲಿ ಗುರಿಯತ್ತ ಹೊಡೆದರು.

ಐದು ನಿಮಿಷಗಳ ನಂತರ ಭಾರತ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅವಕಾಶ ಬಿಟ್ಟುಕೊಟ್ಟಿತು. ಆದರೆ ಜಪಾನ್‌ ಯಶಸ್ಸು ಸಾಧಿಸಲಿಲ್ಲ. ಸಮಬಲಕ್ಕಾಗಿ ಹೋರಾಡಿದ ಜಪಾನ್ ಆಟಗಾರರು ಭಾರತದ ಮೇಲೆ ಸತತ ಒತ್ತಡ ಹೇರಲು ಪ್ರಯತ್ನಿಸಿತು. ಆದರೆ ಬೀರೇಂದ್ರ ಲಾಕ್ರಾ ಅವರನ್ನು ಒಳಗೊಂಡ ರಕ್ಷಣಾ ವಿಭಾಗ ಯಾವುದೇ ಅವಕಾಶವನ್ನು ನೀಡಲಿಲ್ಲ. ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ನಡುವಿನಮತ್ತೊಂದು ಪಂದ್ಯ 2–2ರ ಡ್ರಾ ಆಯಿತು.

ಸೂಪರ್–4 ಹಂತದ ಇಂದಿನ ಪಂದ್ಯಗಳು

ಜಪಾನ್–ಕೊರಿಯಾ

ಆರಂಭ: ಮಧ್ಯಾಹ್ನ 2.30

ಭಾರತ–ಮಲೇಷ್ಯಾ

ಆರಂಭ: ಸಂಜೆ 5.00

(ಸಮಯ: ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.