
ಚೆಂಗ್ಡು: ಹಾಲಿ ಚಾಂಪಿಯನ್ ಭಾರತ ತಂಡ, ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ‘ಸಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಡೊನೇಷ್ಯಾ ಎದುರು ಬುಧವಾರ 1–4 ಅಂತರದಿಂದ ಸೋಲನುಭವಿಸಿತು.
ಇಂಡೊನೇಷ್ಯಾ ಗುಂಪಿನಲ್ಲಿ ಆಡಿದ ಎಲ್ಲ ಮೂರೂ ಪಂದ್ಯ ಗೆದ್ದು ಅಗ್ರಸ್ಥಾನ ಪಡೆದರೆ, ಭಾರತ ಎರಡು ಗೆಲುವಿನೊಡನೆ ಎರಡನೇ ಸ್ಥಾನ ಪಡೆಯಿತು. ಎರಡೂ ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶಿಸಿದವು.
ಈ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತ 3–0 ಯಿಂದ ಇಂಡೊನೇಷ್ಯಾ ಮೇಲೆ ಜಯಗಳಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದಿತ್ತು. ಆ ಸೋಲಿಗೆ ಇಂಡೊನೇಷ್ಯಾ ಸೇಡನ್ನೂ ತೀರಿಸಿಕೊಂಡಿತು.
ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಎಚ್.ಎಸ್.ಪ್ರಣಯ್ 13–21, 21–12, 21–12 ರಿಂದ ಅಂಥೋನಿ ಜಿಂಟಿಂಗ್ ಅವರನ್ನು ಸೋಲಿಸಿ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಆದರೆ ಡಬಲ್ಸ್‌ನಲ್ಲಿ ಅನುಭವಿಗಳಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 24–22, 22–24, 19–21 ರಲ್ಲಿ ಮುಹಮ್ಮದ್ ಶೊಹಿನುಲ್ ಫಿಕ್ರಿ– ಬಗಾಸ್ ಮೌಲಾನಾ ಎದುರು ಸೋಲನುಭವಿಸಿದ್ದರಿಂದ ಸ್ಕೋರ್ 1–1 ಸಮಬಲ ಆಯಿತು.
ಇಂಡೊನೇಷ್ಯಾದ ಇದೇ ಜೋಡಿ ಕಳೆದ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಸಾತ್ವಿಕ್–ಚಿರಾಗ್ ಜೋಡಿಯನ್ನು ಮಣಿಸಿತ್ತು.
22 ವರ್ಷದ ಲಕ್ಷ್ಯ ಸೇನ್ ನಂತರ 18–21, 21–16, 17–21ರಲ್ಲಿ ಆಲ್ ಇಂಗ್ಲೆಂಡ್ ಸಿಂಗಲ್ಸ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ ಅವರಿಗೆ ಸೋತರು.
ನಾಲ್ಕನೇ ಪಂದ್ಯದಲ್ಲಿ ಭಾರತದ ಧ್ರುವ್ ಕಪಿಲ– ಸಾಯಿ ಪ್ರತೀಕ್ ಅವರು 20–22, 11–21ರಲ್ಲಿ ಲಿಯೊ ರೋಲಿ ಕರ್ನಾಲ್ಡೊ – ಡೇನಿಯಲ್ ಮಾರ್ಟಿನ್ ಅವರಿಗೆ ನೇರ ಗೇಮ್‌ಗಳಲ್ಲಿ ಮಣಿದರು. ಇಂಡೊನೇಷ್ಯಾ 3–1 ಗೆಲುವಿನ ಮುನ್ನಡೆ ಪಡೆಯಿತು.
ಅಂತಿಮ (ಸಿಂಗಲ್ಸ್) ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ 21–19, 22–24, 14–21ರಲ್ಲಿ ಚಿಕೊ ಆರೊ ದ್ವಿ ವಾರ್ಡೊಯೊ ಎದುರು ಪರಾಜಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.