ADVERTISEMENT

ಶ್ರೀಕಾಂತ್‌, ಕಶ್ಯಪ್‌ ಜಯಭೇರಿ

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾಯಿ ಪ್ರಣೀತ್‌ಗೆ ಸೋಲು

ಪಿಟಿಐ
Published 29 ಮಾರ್ಚ್ 2019, 18:26 IST
Last Updated 29 ಮಾರ್ಚ್ 2019, 18:26 IST
ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಜೋಡಿಯ ಆಟದ ವೈಖರಿ
ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಜೋಡಿಯ ಆಟದ ವೈಖರಿ   

ನವದೆಹಲಿ: ಅಮೋಘ ಆಟ ಮುಂದುವರಿಸಿದ ಕಿದಂಬಿ ಶ್ರೀಕಾಂತ್ ಮತ್ತು ಪರುಪಳ್ಳಿ ಕಶ್ಯಪ್‌ ಅವರು ಇಂಡಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್‌ ಭಾರತರವರೇ ಆದ ಸಾಯಿ ಪ್ರಣೀತ್ ಎದುರು 21–23, 21–11, 21–19ರಿಂದ ಗೆದ್ದರು. ಚೀನಾ ಥೈಪೆಯ ವಾಂಗ್ ತ್ಸು ವಿ ಅವರನ್ನು 21–16, 21–11ರಿಂದ ಕಶ್ಯಪ್ ಮಣಿಸಿದರು.

2015ರ ಚಾಂಪಿಯನ್‌ ಶ್ರೀಕಾಂತ್‌ಗೆ ಸಾಯಿ ಪ್ರಣೀತ್ ಪ್ರಬಲ ಪೈಪೋಟಿ ನೀಡಿದರು. ಒಂದು ತಾಸು ಎರಡು ನಿಮಿಷ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ರೋಚಕ ಜಯ ಗಳಿಸಿದರು. ಆರಂಭದಲ್ಲಿ 5–2ರಿಂದ ಮುನ್ನಡೆದ ಸಾಯಿಗೆ ನಂತರ ಶ್ರೀಕಾಂತ್ ತಿರುಗೇಟು ನೀಡಿದರು. ಒಂದು ಹಂತದಲ್ಲಿ ಗೇಮ್‌ 13–13ರಿಂದ ಸಮವಾಯಿತು. ನಂತರ ಶ್ರೀಕಾಂತ್‌ 18–14ರ ಮುನ್ನಡೆ ಸಾಧಿಸಿದರು. ಆದರೆ ಕೊನೆಗೆ ಗೇಮ್‌ ಸಾಯಿ ಅವರ ಪಾಲಾಯಿತು.

ADVERTISEMENT

ಎರಡನೇ ಗೇಮ್‌ನಲ್ಲೂ ಸಾಯಿ ಗೆಲುವಿನತ್ತ ಹೆಜ್ಜೆ ಹಾಕಿದ್ದರು. ಆರಂಭದಲ್ಲಿ 7–1ರ ಮುನ್ನಡೆ ಸಾಧಿಸಿದ್ದರು. ಇದರಿಂದ ಎದೆಗುಂದದ ಶ್ರೀಕಾಂತ್‌ ಭರ್ಜರಿ ಆಟವಾಡಿ 15–11ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ಗೇಮ್‌ ತಮ್ಮದಾಗಿಸಿಕೊಂಡರು. ಮೂರನೇ ಗೇಮ್‌ನಲ್ಲೂ ಭಾರಿ ಪೈಪೋಟಿ ಕಂಡುಬಂತು. ಅಂತಿಮವಾಗಿ ಗೆಲುವು ಶ್ರೀಕಾಂತ್ ಪಾಲಾಯಿತು.

ನಾಲ್ಕು ವರ್ಷಗಳ ನಂತರ ಮೊದಲ ಸೆಮಿ:ಕೇವಲ 39 ನಿಮಿಷಗಳಲ್ಲಿ ಎದುರಾಳಿಯನ್ನು ಮಣಿಸಿದ ಕಶ್ಯಪ್‌ ನಾಲ್ಕು ವರ್ಷಗಳ ನಂತರ ಪ್ರಮುಖ ಟೂರ್ನಿಯೊಂದರ ನಾಲ್ಕರ ಘಟ್ಟ ಪ್ರವೇಶಿಸಿದರು.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಭಾರತವರೇ ಆದ ಪ್ರಣವ್ ಜೆರಿ ಚೋಪ್ರಾ ಮತ್ತು ಶಿವಮ್ ಶರ್ಮಾ ಅವರನ್ನು 21–10, 21–12ರಲ್ಲಿ ಮಣಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ–ಸಿಕ್ಕಿ ರೆಡ್ಡಿ ಜೋಡಿ 10–21, 18–21ರಲ್ಲಿ ಗ್ರೇಸಿಯಾ ಪೊಲಿ ಮತ್ತು ಅಪ್ರಿಯಾನಿ ರಹಯು ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.