ಅಮ್ಮಾನ್, ಜೋರ್ಡನ್: ಭಾರತದ ಉದಯೋನ್ಮುಖ ಬಾಕ್ಸರ್‌ಗಳು ಇಲ್ಲಿ ನಡೆದ ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯ ದಿನವಾದ ಗುರುವಾರ 17 ವರ್ಷದೊಳಗಿನವರ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.
ಕೂಟದಲ್ಲಿ ಭಾರತವು 15 ಚಿನ್ನ, 6 ಬೆಳ್ಳಿ ಮತ್ತು 22 ಕಂಚಿನ ಪದಕವನ್ನು ಗೆದ್ದಿದೆ. ಪದಕ ಪಟ್ಟಿಯಲ್ಲಿ ಕಜಕಸ್ತಾನ ಅಗ್ರಸ್ಥಾನ ಪಡೆದರೆ, ಉಜ್ಬೇಕಿಸ್ತಾನ ಮೂರನೇ ಸ್ಥಾನ ಗಳಿಸಿತು.
17 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ಸ್ಪರ್ಧಿಗಳು ನಾಲ್ಕು ಚಿನ್ನ ಗೆದ್ದರು. ಈ ಎಲ್ಲಾ ಪದಕಗಳು ಬಾಲಕಿಯರೇ ಜಯಿಸಿದ್ದು ವಿಶೇಷ.
ಖುಷಿ ಚಂದ್ (46 ಕೆ.ಜಿ) ಫೈನಲ್ ಹಣಾಹಣಿಯಲ್ಲಿ 3–2 ಅಂತರದಿಂದ ಮಂಗೋಲಿಯಾದ ಅಲ್ತಂಜುಲ್ ಅಲ್ತಂಗದಾಸ್ ಅವರನ್ನು ಮಣಿಸಿದರು. ಅಹಾನಾ ಶರ್ಮಾ (50 ಕೆ.ಜಿ) ಮತ್ತು ಜನ್ನತ್ (54 ಕೆ.ಜಿ) ಅವರು ತಲಾ 5–0 ಅಂತರದಿಂದ ಉಜ್ಬೇಕಿಸ್ತಾನದ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸಿದರು. ಅಂತಿಮ ಚಿನ್ನವನ್ನು ಅನ್ಶಿಕಾ (80+ ಕೆ.ಜಿ) ಗೆದ್ದರು. ಅವರು ಜೋರ್ಡಾನ್‌ನ ಜನ ಅಲವ್ನೆಹ್ ಎದುರು ವಿಜಯಶಾಲಿಯಾದರು.
ಸಿಮ್ರನ್‌ಜೀತ್ ಕೌರ್ (60 ಕೆ.ಜಿ) ಮತ್ತು ಹರ್ಷಿಕಾ (63 ಕೆ.ಜಿ) ಬೆಳ್ಳಿ ಪದಕ ಗೆದ್ದರು. ಐದು ಬಾಲಕಿಯರು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.
ಬಾಲಕರ ವಿಭಾಗದಲ್ಲಿ ದೇವಾಂಶ್ (80 ಕೆ.ಜಿ) 0–5ರಿಂದ ಕಜಕಸ್ತಾನದ ಮುಖಮೆಡಲಿ ರುಸ್ಟೆಂಬೆಕ್ ವಿರುದ್ಧ ಸೋತು ಬೆಳ್ಳಿಗೆ ಕೊರಳೊಡ್ಡಿದರು. ಆರು ಬಾಲಕರು ಕಂಚಿನ ಪದಕ ಗೆದ್ದರು.
15 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ಬಾಕ್ಸರ್‌ಗಳು 11 ಚಿನ್ನ, 3 ಬೆಳ್ಳಿ ಮತ್ತು 11 ಕಂಚು ಸೇರಿದಂತೆ ಒಟ್ಟು 25 ಪದಕಗಳನ್ನು ಬುಧವಾರ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.