ADVERTISEMENT

ವಿಶ್ವ ಟೇಬಲ್ ಟೆನಿಸ್‌ ಟೀಮ್ ಚಾಂಪಿಯನ್‌ಷಿಪ್‌: ಭಾರತದ ತಂಡಗಳಿಗೆ ಸೋಲು

ಒಲಿಂಪಿಕ್ಸ್‌ ಅರ್ಹತೆ ಅವಕಾಶ ಜೀವಂತ

ಪಿಟಿಐ
Published 21 ಫೆಬ್ರುವರಿ 2024, 16:04 IST
Last Updated 21 ಫೆಬ್ರುವರಿ 2024, 16:04 IST
ಟೇಬಲ್ ಟೆನಿಸ್
ಟೇಬಲ್ ಟೆನಿಸ್   

ಬೂಸಾನ್ (ದಕ್ಷಿಣ ಕೊರಿಯಾ): ಭಾರತ ತಂಡಗಳು, ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಟೀಮ್‌ ಚಾಂಪಿಯನ್‌ಷಿಪ್‌ನ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದವು. ಬುಧವಾರ ಪುರುಷರ ವಿಭಾಗದ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಕೊರಿಯಾ 3–0 ಯಿಂದ ಭಾರತ ತಂಡವನ್ನು ಸೋಲಿಸಿತು.

ಮಹಿಳೆಯರ ವಿಭಾಗದಲ್ಲಿ ಭಾರತ ತಂಡ 1–3 ರಿಂದ ಚೀನಾ ತೈಪೆ ತಂಡಕ್ಕೆ ಮಣಿಯಿತು. ಆದರೆ ಸೋಲಿನ ಹೊರತಾಗಿಯೂ, ಇಲ್ಲಿನ ಉತ್ತಮ ನಿರ್ವಹಣೆ ಹಾ್ಗೂ ಸುಧಾರಿತ ವಿಶ್ವ ರ್‍ಯಾಂಕಿಂಗ್ ಬಲದಿಂದ ಭಾರತದ ತಂಡಗಳು ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶ ಉಜ್ವಲವಾಗಿದೆ. ಕ್ವಾರ್ಟರ್‌ಫೈನಲ್ ತಲುಪಿದಲ್ಲಿ ಭಾರತ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು.‌

ವಿಶ್ವ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಗಣನೆಗೆ ತೆಗೆದುಕೊಂಡ ನಂತರ ಈ ಸಂಬಂಧ ಅಂತಿಮ ಘೋಷಣೆ ಮಾರ್ಚ್‌ 5ರಂದು ಪ್ರಕಟವಾಗಲಿದೆ. ಮಹಿಳೆಯರ ಪ್ರಸ್ತುತ 17ನೇ ಮತ್ತು ಪುರುಷರ ತಂಡ 15ನೇ ಕ್ರಮಾಂಕ ಪಡೆದಿವೆ.

ADVERTISEMENT

‘ಪುರುಷರ ಮತ್ತು ಮಹಿಳಾ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಆದರೆ ನಾವು ಮಾರ್ಚ್‌ನಲ್ಲಿ ಅಧಿಕೃತ ಘೋಷಣೆಯಾಗುವವರೆಗೆ ಕಾಯಬೇಕಾಗಿದೆ’ ಎಂದು ಭಾರತ ಟೇಬಲ್ ಟೆನಿಸ್‌ ಫೆಡರೇಷನ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಬಲ ಕೊರಿಯಾ ಪುರುಷರ ತಂಡ ನಿರೀಕ್ಷೆಯಂತೆ ಭಾರತದ ಮೇಲೆ ಜಯಗಳಿಸಿತು. 41 ವರ್ಷದ ಶರತ್‌ ಕಮಾಲ್ ಒಂದು ಗೇಮ್ ಪಡೆದಿದ್ದನ್ನು ಬಿಟ್ಟರೆ ಉಳಿದಂತೆ ಕೊರಿಯಾದ್ದೇ ಮೇಲುಗೈ. ಮೊದಲ ಸಿಂಗಲ್ಸ್‌ನಲ್ಲಿ ಜಾಂಗ್ ವೂಜಿನ್ 12–10, 13–11, 11–7 ರಿಂದ ಹರ್ಮೀತ್ ದೇಸಾಯಿ ಅವರನ್ನು ಹಿಮ್ಮೆಟ್ಟಿಸಿದರೆ, ಲಿಮ್‌ ಜಾಂಗ್‌ಹೂನ್ ಎರಡನೇ ಸಿಂಗಲ್ಸ್‌ನಲ್ಲಿ 11–9, 11–5, 8–11, 11–4 ರಿಂದ ಅಚಿಂತ ಶರತ್ ಕಮಾಲ್ ವಿರುದ್ಧ ಗೆಲುವು ಸಾಧಿಸಿದರು. ಲೀ ಸಂಗ್ ಸು 11–5, 11–8, 11–2 ರಿಂದ ಜ್ಞಾನಶೇಖರನ್ ಸತ್ಯನ್ ಅವರನ್ನು ಮಣಿಸಲು ಕಷ್ಟಪಡಲಿಲ್ಲ.

ಮಹಿಳೆಯರ ವಿಭಾಗದ ಪ್ರಿಕ್ವಾರ್ಟರ್‌ಫೈನಲ್‌ನ ಮೊದಲ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ ತೀವ್ರ ಹೋರಾಟದ ನಂತರ 11-8, 8-11, 4-11, 11-9, 11-9 ರಿಂದ ತೈಪೆಯ ಚೆನ್‌ ತ್ಜು ಯು ಅವರನ್ನು ಸೋಲಿಸಿದರು. ಆದರೆ ಅಕುಲಾ ಶ್ರೀಜಾ 6-11, 9-11, 5-11 ರಲ್ಲಿ ಚೆಂಗ್‌ ಐ ಚಿಂಗ್ ಅವರಿಗೆ ಮಣಿದರು. ಐಹಿಕಾ ಮುಖರ್ಜಿ 10-12, 13-15, 11-9, 2-11 ರಲ್ಲಿ ಲೀ ಯು ಜುನ್ ಎದುರು ಸೋಲನುಭವಿಸಿದರು.  ಎರಡನೇ ಬಾರಿ ಸಿಂಗಲ್ಸ್ ಆಡಿದ ಮಣಿಕಾ 10-12, 11-5, 9-11, 5-11 ರಿಂದ ಚೆಂಗ್‌ ಐ ಚಿಂಗ್ ಅವರೆದುರು ಪರಾಜಯ ಕಂಡರು.

ಭಾರತಕ್ಕೆ ಮಣಿದ ಕಜಕಸ್ತಾನ

ಬೆಳಿಗ್ಗೆ ನಡೆದ 32ರ ಸುತ್ತಿನ ಪಂದ್ಯಗಳಲ್ಲಿ ಭಾರತ ಪುರುಷರ ತಂಡ 3–2 ರಲ್ಲಿ ಪ್ರಯಾಸದಿಂದ ಕಜಕಸ್ತಾನ ತಂಡವನ್ನು ಮಣಿಸಿ ಪ್ರಿಕ್ವಾರ್ಟರ್‌ಫೈನಲ್ ತಲುಪಿತ್ತು. ಮಹಿಳೆಯರ ತಂಡ 3–0 ಯಿಂದ ಇಟಲಿ ತಂಡದ ಮೇಲೆ ಗೆಲುವು ಸಾಧಿಸಿ 16ರ ಘಟ್ಟ ತಲುಪಿತ್ತು. ಆದರೆ ಮಧ್ಯಾಹ್ನ ಪ್ರಿಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.