ADVERTISEMENT

ರಿಲೆ: ಹೀಟ್ಸ್‌ನಲ್ಲಿ ಭಾರತಕ್ಕೆ ಐದನೇ ಸ್ಥಾನ

ವಿಶ್ವ ಚಾಂಪಿಯನ್‌ಷಿಪ್‌ ಅರ್ಹತಾ ಮಟ್ಟ ತಲುಪಲು ವಿಫಲ

ಪಿಟಿಐ
Published 10 ಮೇ 2025, 16:22 IST
Last Updated 10 ಮೇ 2025, 16:22 IST
<div class="paragraphs"><p>ರಿಲೆ</p></div>

ರಿಲೆ

   

ಗುವಾಂಗ್‌ಝೌ, ಚೀನಾ: ಭಾರತದ ಪುರುಷರ ಮತ್ತು ಮಿಶ್ರ 4x400 ಮೀಟರ್‌ ರಿಲೆ ತಂಡಗಳು ಇಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಸ್ಪರ್ಧೆಯ ತಮ್ಮ ಹೀಟ್ಸ್‌ಗಳಲ್ಲಿ ಕ್ರಮವಾಗಿ ಐದನೇ ಸ್ಥಾನ ಪಡೆದವು. ಎರಡೂ ತಂಡಗಳಿಗೂ ವಿಶ್ವ ಚಾಂಪಿಯನ್‌ಷಿಪ್‌ನ ನೇರ ಅರ್ಹತಾ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ.

ಸೆಪ್ಟೆಂಬರ್‌ 13ರಿಂದ 21ರವರೆಗೆ ಟೋಕಿಯೊ ವಿಶ್ವ ಚಾಂಪಿಯನ್‌ಷಿಪ್‌ ನಡೆಯಲಿದೆ. ಈ ಕೂಟಕ್ಕೆ ಟಿಕೆಟ್‌ ಪಡೆಯಲು ಭಾರತದ ಉಭಯ ತಂಡಗಳಿಗೆ ಭಾನುವಾರ ಮತ್ತೊಂದು ಅವಕಾಶ ಸಿಗಲಿದೆ. 

ADVERTISEMENT

ಜಯ್ ಕುಮಾರ್, ಸ್ನೇಹಾ ಕೊಲ್ಲೇರಿ, ಧರ್ಮವೀರ್ ಚೌಧರಿ ಮತ್ತು ರೂಪಲ್ ಚೌಧರಿ ಅವರನ್ನು ಒಳಗೊಂಡ ಮಿಶ್ರ ತಂಡವು 3 ನಿಮಿಷ 16.85 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿತು. ಹೀಟ್ಸ್‌ನಲ್ಲಿದ್ದ ಏಳು ತಂಡಗಳ ಪೈಕಿ ಐದನೇ ಸ್ಥಾನ ಗಳಿಸಿತು. ಇದು ಭಾರತ ಮಿಶ್ರ ತಂಡದ ಋತುವಿನ ಅತ್ಯುತ್ತಮ ಸಾಧನೆಯಾಗಿದ್ದರೂ ರಾಷ್ಟ್ರೀಯ ದಾಖಲೆಯಿಂದ (3 ನಿ.12.87ಸೆ) ಬಹಳಷ್ಟು ದೂರವಿದೆ.

ಮೂರು ಹೀಟ್ಸ್‌ಗಳಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಮತ್ತು ವೇಗವಾಗಿ ಗುರಿ ತಲುಪಿದ ಇತರ ಎರಡು ತಂಡಗಳು ವಿಶ್ವ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಪಡೆಯುತ್ತವೆ. ವಿಶ್ವ ಅಥ್ಲೆಟಿಕ್ಸ್ ರಿಲೆ ಫೈನಲ್‌ ಭಾನುವಾರ ನಡೆಯಲಿದೆ.

ಭಾರತ ತಂಡವು ಫೈನಲ್‌ ಪ್ರವೇಶಿಸಲು ವಿಫಲವಾದರೂ ಭಾನುವಾರ ನಡೆಯುವ ಹೀಟ್‌ 2ರಲ್ಲಿ ಸ್ಪರ್ಧಿಸಿ, ವಿಶ್ವ ಚಾಂಪಿಯನ್‌ಷಿಪ್‌ ಅರ್ಹತೆಗೆ ಮತ್ತೊಂದು ಅವಕಾಶ ಹೊಂದಿದೆ. ಬೋಟ್ಸ್ವಾನಾ, ಇಟಲಿ, ಜರ್ಮನಿ, ಉಗಾಂಡಾ ಮತ್ತು ಕೆನಡಾ ತಂಡಗಳೊಂದಿಗೆ ಭಾರತ ಸೆಣಸಲಿದೆ. 

ಭಾನುವಾರ ನಡೆಯಲಿರುವ ಎರಡು ಹೀಟ್‌ಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವ ತಂಡಗಳು ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುತ್ತವೆ.

2023ರ ವಿಶ್ವ ಚಾಂಪಿಯನ್‌ಷಿಪ್ ಮತ್ತು 2024ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅಥ್ಲೀಟ್‌ಗಳನ್ನು ಹೊರಗಿಟ್ಟು, ಭಾರತ ಪುರುಷರ 4x400 ಮೀಟರ್ ರಿಲೆ ತಂಡದಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ.

ಜಯ್ ಕುಮಾರ್, ಸಂತೋಷ್ ಕುಮಾರ್ ತಮಿಳರಸನ್, ತೆಕ್ಕಿನಲಿಲ್ ಸಜಿ ಮನು, ತೆನ್ನರಸು ಕಾಯಲ್ವಿಳಿ ವಿಶಾಲ್ ಮತ್ತು ಮೋಹಿತ್ ಕುಮಾರ್ ಅವರ ತಂಡವು 3 ನಿಮಿಷ 03.92 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ, ಹೀಟ್ಸ್‌ನಲ್ಲಿದ್ದ ಆರು ತಂಡಗಳ ಪೈಕಿ ಐದನೇ ಸ್ಥಾನ ಗಳಿಸಿತು.

ಈ ತಂಡವೂ ಋತುವಿನ ಅತ್ಯುತ್ತಮ ಸಮಯವನ್ನು ಓಡಿತು. ಆದರೆ, ರಾಷ್ಟ್ರೀಯ ದಾಖಲೆಯ (2:59.05) ತಲುಪಲು ಸಾಧ್ಯವಾಗಲಿಲ್ಲ. ಈ ತಂಡಕ್ಕೂ ಭಾನುವಾರ ನಡೆಯಲಿರುವ ಹೀಟ್ಸ್‌ 2ರಲ್ಲಿ  ಟೋಕಿಯೊ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸುವ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.