ADVERTISEMENT

ರೋಯಿಂಗ್‌: ಒಲಿಂಪಿಕ್ಸ್‌ಗೆ ಅರ್ಜುನ್– ಅರವಿಂದ್

ತಂಡ ವಿಭಾಗದಲ್ಲಿ ಟೋಕಿಯೊ ಟಿಕೆಟ್ ಗಿಟ್ಟಿಸಿದ ಜೋಡಿ

ಪಿಟಿಐ
Published 7 ಮೇ 2021, 11:14 IST
Last Updated 7 ಮೇ 2021, 11:14 IST
ದೋಣಿಯನ್ನು ಮುನ್ನಡೆಸಿದ ಭಾರತದ ಅರ್ಜುನ್ ಲಾಲ್‌ ಹಾಗೂ ಅರವಿಂದ್ ಸಿಂಗ್‌– ಎಎಫ್‌ಪಿ ಚಿತ್ರ
ದೋಣಿಯನ್ನು ಮುನ್ನಡೆಸಿದ ಭಾರತದ ಅರ್ಜುನ್ ಲಾಲ್‌ ಹಾಗೂ ಅರವಿಂದ್ ಸಿಂಗ್‌– ಎಎಫ್‌ಪಿ ಚಿತ್ರ   

ನವದೆಹಲಿ : ಭಾರತದ ರೋಯಿಂಗ್ ಸ್ಪರ್ಧಿಗಳಾದ ಅರ್ಜುನ್ ಲಾಲ್ ಜಾಟ್‌ ಹಾಗೂ ಅರವಿಂದ್‌ ಸಿಂಗ್ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ್ದಾರೆ. ಟೋಕಿಯೊದಲ್ಲಿ ನಡೆದ ಏಷ್ಯಾ ಒಷಾನಿಯಾ ಅರ್ಹತಾ ಟೂರ್ನಿಯ ಪುರುಷರ ಲೈಟ್‌ವೇಟ್ ಡಬಲ್‌ ಸ್ಕಲ್ ವಿಭಾಗದಲ್ಲಿ ಈ ಜೋಡಿಯು ಎರಡನೇ ಸ್ಥಾನ ಗಳಿಸುವ ಮೂಲಕ ಕೂಟಕ್ಕೆ ಅರ್ಹತೆ ಪಡೆಯಿತು.

ಪುರುಷರ ವೈಯಕ್ತಿಕ ಸಿಂಗಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಭಾರತದ ಜಕರ್ ಖಾನ್‌ ಒಲಿಂಪಿಕ್ಸ್ ಅವಕಾಶ ತಪ್ಪಿಸಿಕೊಂಡರು. ಏಕೆಂದರೆ ಸ್ಕಲ್ ವಿಭಾಗದಲ್ಲಿ ಒಂದು ದೇಶಕ್ಕೆ ಒಂದು ಅರ್ಹತಾ ಸ್ಥಾನ ಮಾತ್ರ ಮೀಸಲಾಗಿಡಲಾಗಿದೆ.

ಪುರುಷರ ಲೈಟ್‌ವೇಟ್‌ ಡಬಲ್‌ ಸ್ಕಲ್‌ನಲ್ಲಿ ಅಗ್ರ ಮೂರು ಸ್ಥಾನ ಗಳಿಸಿದವರು ಟೋಕಿಯೊ ಟಿಕೆಟ್‌ ಗಳಿಸಿದರು.

ADVERTISEMENT

‘ಈ ಸ್ಪರ್ಧೆಯಲ್ಲಿ ಪ್ರತಿ ದೇಶಕ್ಕೆ ಒಂದು ಅರ್ಹತಾ ಸ್ಥಾನ ಮಾತ್ರ ಗಳಿಸುವ ಅವಕಾಶವಿತ್ತು. ಅರವಿಂದ್ ಹಾಗೂ ಅರ್ಜುನ್‌ ಇಲ್ಲಿ ಎರಡನೇ ಸ್ಥಾನ ಪಡೆದು ಅರ್ಹತೆ ಪಡೆದರು. ವೈಯಕ್ತಿಕ ವಿಭಾಗದಲ್ಲಿ ಜಕರ್ ಖಾನ್ ನಾಲ್ಕನೇ ಸ್ಥಾನ ಗಳಿಸಿದರು. ಆದರೆ ದುರದೃಷ್ಟವಶಾತ್‌ ಅವರಿಗೆ ಅವಕಾಶ ಕೈ ತಪ್ಪಿತು‘ ಎಂದು ಭಾರತ ರೋಯಿಂಗ್ ಫಡೆರೇಷನ್‌ ಅಧ್ಯಕ್ಷೆ ರಾಜಲಕ್ಷ್ಮೀ ಸಿಂಗ್ ದೇವ್ ತಿಳಿಸಿದರು.

ಜುಲೈ 23ರಂದು ಆರಂಭವಾಗುವ ಒಲಿಂಪಿಕ್ಸ್‌ಗೆ ರೋಯಿಂಗ್‌ನಲ್ಲಿ ಭಾರತದಿಂದ ಅರ್ಜುನ್ ಲಾಲ್‌ ಮತ್ತು ಅರವಿಂದ್ ಮಾತ್ರ ಸ್ಪರ್ಧಿಸಲಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಇತರ ಅರ್ಹತಾ ಟೂರ್ನಿಗಳಲ್ಲಿ ಭಾರತದವರು ಪಾಲ್ಗೊಳ್ಳುತ್ತಿಲ್ಲ.

‘ಇಟಲಿಯಲ್ಲಿ ಮತ್ತೊಂದು ಒಲಿಂಪಿಕ್ಸ್ ಅರ್ಹತಾ ಟೂರ್ನಿ ನಡೆಯಲಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ನಾವು ಸ್ಪರ್ಧಿಗಳನ್ನು ಕಳುಹಿಸುತ್ತಿಲ್ಲ. ಹೀಗಾಗಿ ಟೋಕಿಯೊದಲ್ಲಿ ನಡೆಯುತ್ತಿರುವುದೇ ನಮಗೆ ಕೊನೆಯ ಅರ್ಹತಾ ಸ್ಪರ್ಧೆಯಾಗಿದೆ‘ ಎಂದು ರಾಜಲಕ್ಷ್ಮೀ ತಿಳಿಸಿದರು.

ಟೋಕಿಯೊದ ‘ಸೀ ಫಾರೆಸ್ಟ್ ವಾಟರ್‌ವೇ‘ಯಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತದ 14 ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.