ADVERTISEMENT

ಹಾಕಿ: ಅರ್ಜೆಂಟೀನಾ ಬಿ ತಂಡಕ್ಕೆ ಮಣಿದ ಭಾರತದ ಮಹಿಳೆಯರು

ಪಿಟಿಐ
Published 23 ಜನವರಿ 2021, 13:07 IST
Last Updated 23 ಜನವರಿ 2021, 13:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬ್ಯೂನಸ್ ಐರಿಸ್‌, ಅರ್ಜೆಂಟೀನಾ: ಪಂದ್ಯದ ಕೊನೆಯ ಹಂತದಲ್ಲಿ ಗೋಲು ನೀಡಿದ ಭಾರತ ಮಹಿಳಾ ಹಾಕಿ ತಂಡವು ಅರ್ಜೆಂಟೀನಾ ಬಿ ತಂಡದ ಎದುರು ಶನಿವಾರ 1–2ರಿಂದ ಸೋಲು ಅನುಭವಿಸಿತು. ಅರ್ಜೆಂಟೀನಾ ಪ್ರವಾಸದಲ್ಲಿ ಭಾರತಕ್ಕೆ ಇದು ಮೊದಲ ಸೋಲು.

ಪಂದ್ಯದ 11ನೇ ನಿಮಿಷದಲ್ಲಿ ಗೋಲು ಗಳಿಸಿದ ಸೋಲ್‌ ಪಾವೆಲ್ಲಾ ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಭಾರತ ತಂಡದ ಪರ 54ನೇ ನಿಮಿಷದಲ್ಲಿ ಕೈಚಳಕ ಮೆರೆದ ಸಲೀಮಾ ಟೆಟೆ ಸಮಬಲ ಸಾಧಿಸಿದರು. ಇದಾದ ಮೂರು ನಿಮಿಷಗಳಲ್ಲೇ ಪ್ರವಾಸಿ ತಂಡದ ಡಿಫೆನ್ಸ್ ವಿಭಾಗವನ್ನು ವಂಚಿಸಿ ಗೋಲು ದಾಖಲಿಸಿದ ಅಗಸ್ಟಿನಾ ಗೊರ್ಜಲೇನಿ (57ನೇ ನಿಮಿಷ) ಅರ್ಜೆಂಟೀನಾದ ಗೆಲುವಿಗೆ ಕಾರಣರಾದರು.

ಈ ಹಿಂದಿನ ಎರಡು ಪಂದ್ಯಗಳಲ್ಲಿ ಭಾರತ ತಂಡವು ಅರ್ಜೆಂಟೀನಾ ಜೂನಿಯರ್ ತಂಡದ ಎದುರು ಕ್ರಮವಾಗಿ 2–2 ಹಾಗೂ 1–1ರ ಡ್ರಾ ಸಾಧಿಸಿತ್ತು.

ADVERTISEMENT

‘ಇಂದು ನಾವು ರಾಷ್ಟ್ರೀಯ ತಂಡದ ಆಟಗಾರ್ತಿಯರನ್ನು ಒಳಗೊಂಡ ಬಲಿಷ್ಠ ಅರ್ಜೆಂಟೀನಾ ಎದುರು ಆಡಿದೆವು. ಮುಂದಿನ ವಾರ ಆರಂಭವಾಗಲಿರುವ ಸರಣಿಗೆ ಇದೊಂದು ಪರಿಪೂರ್ಣ ಅಭ್ಯಾಸದ ಪಂದ್ಯ ಆಗಿತ್ತು. ದುರದೃಷ್ಟವಶಾತ್‌ ಪಂದ್ಯದ ಕೊನೆಯ ಹಂತದಲ್ಲಿ ಎದುರಾಳಿಗೆ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟೆವು. ಈ ಹಂತದಲ್ಲಿ ನಾವು ಉತ್ತಮವಾಗಿ ಆಡಬೇಕಿತ್ತು‘ ಎಂದು ಭಾರತ ತಂಡದ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್ ಹೇಳಿದ್ದಾರೆ.

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಅರ್ಜೆಂಟೀನಾ ಬಿ ತಂಡವನ್ನು ಭಾರತ ಮತ್ತೊಮ್ಮೆ ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.