ADVERTISEMENT

ಕಣದಲ್ಲಿ ಸಿಂಧು, ಸೈನಾ

ಇಂದಿನಿಂದ ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 21 ಜನವರಿ 2019, 15:46 IST
Last Updated 21 ಜನವರಿ 2019, 15:46 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಜಕಾರ್ತ: ಭಾರತದ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಮಂಗಳವಾರದಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಸಿಂಧು, ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದಾರೆ. ಬುಧವಾರ ನಡೆಯುವ ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಸಿಂಧು, ಚೀನಾದ ಲೀ ಕ್ಸುಯೆರುಯಿ ಎದುರು ಸೆಣಸಲಿದ್ದಾರೆ.

ಹೋದ ವಾರ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಸೈನಾ, ಜಕಾರ್ತದಲ್ಲಿ ಟ್ರೋಫಿಗೆ ಮುತ್ತಿಕ್ಕುವ ವಿಶ್ವಾಸದಲ್ಲಿದ್ದಾರೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಸೈನಾ ಮೊದಲ ಸುತ್ತಿನಲ್ಲಿ, ಅರ್ಹತಾ ಹಂತದಲ್ಲಿ ಗೆದ್ದುಬಂದ ಆಟಗಾರ್ತಿಯ ಜೊತೆ ಸೆಣಸಲಿದ್ದಾರೆ.

ADVERTISEMENT

ಕಿದಂಬಿ ಶ್ರೀಕಾಂತ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದಾರೆ. ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದ ಶ್ರೀಕಾಂತ್‌, ಮೊದಲ ಸುತ್ತಿನಲ್ಲಿ ಮಲೇಷ್ಯಾದ ಡರೆನ್‌ ಲೀವ್‌ ಎದುರು ಆಡಲಿದ್ದಾರೆ.

ಸಮೀರ್‌ ವರ್ಮಾ, ಬಿ.ಸಾಯಿ ಪ್ರಣೀತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರೂ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಹಾಗೂ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಅವರು ಭಾರತದ ಸವಾಲು ಎತ್ತಿಹಿಡಿಯಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಮೈದಾನಕ್ಕಿಳಿಯಲಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಹೈದರಾಬಾದ್‌ನ ಎನ್‌.ಸಿಕ್ಕಿ ರೆಡ್ಡಿ ಅವರು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಜೊಂಗ್‌ಕೊಲ್‌ಪನ್‌ ಮತ್ತು ರಾವಿಂಡ ಪ್ರಾಜೊಂಗ್‌ಜಾಯ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸಾತ್ವಿಕ್‌ ಮತ್ತು ಅಶ್ವಿನಿ ಅವರಿಗೆ ಇಂಗ್ಲೆಂಡ್‌ನ ಕ್ರಿಸ್‌ ಮತ್ತು ಗೇಬ್ರಿಯೆಲ್‌ ಅಡ್‌ಕಾಕ್‌ ಅವರ ಸವಾಲು ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.