ADVERTISEMENT

ಕ್ವಾರ್ಟರ್‌ಗೆ ಸಿಂಧು, ಪ್ರಣೀತ್‌

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌ ಸವಾಲು ಅಂತ್ಯ

ಪಿಟಿಐ
Published 25 ಜುಲೈ 2019, 19:45 IST
Last Updated 25 ಜುಲೈ 2019, 19:45 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಟೋಕಿಯೊ: ಗೆಲುವಿನ ಆಟ ಮುಂದುವರಿಸಿರುವ ಭಾರತದ ಪಿ.ವಿ.ಸಿಂಧು ಮತ್ತು ಬಿ.ಸಾಯಿ ಪ್ರಣೀತ್‌ ಅವರು ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಎಚ್‌.ಎಸ್‌.ಪ್ರಣಯ್‌, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಿಂಧು 11–21, 21–10, 21–13ರಲ್ಲಿ ಜಪಾನ್‌ನ ಅಯಾ ಒಹೋರಿ ಎದುರು ಗೆದ್ದರು. ಇದರೊಂದಿಗೆ ಒಹೋರಿ ಎದುರಿನ ಜಯದ ದಾಖಲೆಯನ್ನು 8–0ಗೆ ಹೆಚ್ಚಿಸಿಕೊಂಡರು.

ADVERTISEMENT

ಶ್ರೇಯಾಂಕ ರಹಿತ ಆಟಗಾರ್ತಿ ಒಹೋರಿ ಮೊದಲ ಗೇಮ್‌ನಲ್ಲಿ ಸಿಂಧುಗೆ ಚಳ್ಳೆಹಣ್ಣು ತಿನ್ನಿಸಿದರು. ಹಲವು ತಪ್ಪುಗಳನ್ನು ಮಾಡಿದ್ದು, ಸಿಂಧುಗೆ ಮುಳುವಾಯಿತು.

ಐದನೇ ಶ್ರೇಯಾಂಕದ ಭಾರತದ ಆಟಗಾರ್ತಿ ಎರಡನೇ ಗೇಮ್‌ನಲ್ಲಿ ಪುಟಿದೆದ್ದರು. ಆರಂಭದಲ್ಲಿ 0–2ರಿಂದ ಹಿಂದಿದ್ದ ಸಿಂಧು ನಂತರ ಸತತ ಮೂರು ಪಾಯಿಂಟ್ಸ್‌ ಹೆಕ್ಕಿ 3–2 ಮುನ್ನಡೆ ಗಳಿಸಿದರು. ನಂತರ ಭಾರತದ ಆಟಗಾರ್ತಿ ಹಿಂತಿರುಗಿ ನೋಡಲೇ ಇಲ್ಲ.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲೂ ಸಿಂಧು ಪ್ರಾಬಲ್ಯ ಮೆರೆದರು. ಶುರುವಿನಿಂದಲೇ ಮುನ್ನಡೆ ಕಾಪಾಡಿಕೊಂಡು ಸಾಗಿದ ಅವರು ಒಂದು ಹಂತದಲ್ಲಿ ಸತತ ಆರು ಪಾಯಿಂಟ್ಸ್‌ ಕಲೆಹಾಕಿ ಗೆಲುವಿನ ಹಾದಿ ಸುಗಮ ಮಾಡಿಕೊಂಡರು.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಹಿರಿಮೆ ಹೊಂದಿರುವ ಸಿಂಧು, ದ್ವಿತೀಯಾರ್ಧದಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ ಸಂಭ್ರಮಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣೀತ್‌ 21–13, 21–16 ನೇರ ಗೇಮ್‌ಗಳಿಂದ ಕಂಟಾ ಸುನೆಯಾಮಾ ಎದುರು ಗೆದ್ದರು. ಈ ಹೋರಾಟ 45 ನಿಮಿಷ ನಡೆಯಿತು.

ಪ್ರಣೀತ್‌, ಸುನೆಯಾಮಾ ಎದುರಿನ ಹೋರಾಟದ ಎರಡು ಗೇಮ್‌ಗಳಲ್ಲೂ ಮಿಂಚಿನ ಸಾಮರ್ಥ್ಯ ತೋರಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಪ್ರಣೀತ್‌, ಮುಂದಿನ ಸುತ್ತಿನಲ್ಲಿ ಇಂಡೊನೇಷ್ಯಾದ ಟಾಮಿ ಸುಗಿಯಾರ್ಟೊ ಎದುರು ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಮತ್ತೊಂದು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣಯ್‌ 9–21, 15–21ರಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಎದುರು ಸೋತರು.

ಮೊದಲ ಸುತ್ತಿನಲ್ಲಿ ಪ್ರಣಯ್‌, ಸಹ ಆಟಗಾರ ಕಿದಂಬಿ ಶ್ರೀಕಾಂತ್‌ಗೆ ಆಘಾತ ನೀಡಿದ್ದರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ 15–21, 21–11, 21–19ರಲ್ಲಿ ಚೀನಾದ ಕಿಯಾ ಕ್ಸಿಯಾಂಗ್‌ ಹುವಾಂಗ್‌ ಮತ್ತು ಚೆಂಗ್‌ ಲಿವು ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಮುಂದಿನ ಸುತ್ತಿನಲ್ಲಿ ಭಾರತದ ಜೋಡಿ, ಜಪಾನ್‌ನ ಟಕೇಶಿ ಕಮುರಾ ಮತ್ತು ಕೀಗೊ ಸೊನೊಡೊ ಅವರನ್ನು ಎದುರಿಸಲಿದೆ.

ಮಿಶ್ರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಾತ್ವಿಕ್‌ ಸಾಯಿರಾಜ್‌ ಮತ್ತು ಅಶ್ವಿನಿ ಪೊನ್ನಪ್ಪ 16–21, 17–21ರಲ್ಲಿ ಡೆಚಾಪೊಲ್‌ ಪುವಾರನುಕ್ಕೋರ್‌ ಮತ್ತು ಸಪ್ಸಿರೀ ಟಯೆರಾಟ್ಟಾಂಚಾಯ್‌ ಎದುರು ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.