ADVERTISEMENT

ಅಂಜು ಹೆಸರು ಶಿಫಾರಸು: ಕೆಎಎ ವಿರುದ್ಧ ‘ಪತ್ರ ಚಳವಳಿ’

ಭಾರತ ಅಥ್ಲೆಟಿಕ್‌ ಫೆಡರೇಷನ್ ಪದಾಧಿಕಾರಿಗಳು–ಕಾರ್ಯಕಾರಿ ಸಮಿತಿ ಆಯ್ಕೆ ಚುನಾವಣೆ ನಾಳೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 19:07 IST
Last Updated 29 ಅಕ್ಟೋಬರ್ 2020, 19:07 IST
ಅಥ್ಲೆಟಿಕ್ಸ್‌ ಟ್ರ್ಯಾಕ್‌ (ಪ್ರಾತಿನಿಧಿಕ ಚಿತ್ರ)
ಅಥ್ಲೆಟಿಕ್ಸ್‌ ಟ್ರ್ಯಾಕ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಭಾರತ ಅಥ್ಲೆಟಿಕ್ ಫೆಡರೇಷನ್‌ನ (ಎಎಫ್‌ಐ) ಹಿರಿಯ ಉಪಾಧ್ಯಕ್ಷರ ಸ್ಥಾನಕ್ಕೆ ಕರ್ನಾಟಕದಿಂದ ಅಂಜು ಬಾಬಿ ಜಾರ್ಜ್ ಹೆಸರು ಶಿಫಾರಸು ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯಲ್ಲಿ (ಕೆಎಎ) ಲೀನವಾಗಿರುವ ರಾಜ್ಯದ 10ಕ್ಕೂ ಹೆಚ್ಚು ಘಟಕಗಳ ಪದಾಧಿಕಾರಿಗಳು ಈ ಸಂಬಂಧ ಎಎಫ್‌ಐಗೆ ಪತ್ರ ಬರೆದಿದ್ದು ಅಂಜು ಅವರ ಹೆಸರನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದ್ದಾರೆ.

ಕಾರ್ಯಕಾರಿ ಸಮಿತಿಯ ಎಂಟು ಸದಸ್ಯರು ಒಳಗೊಂಡಂತೆ ಒಟ್ಟು 23 ಸ್ಥಾನಗಳಿಗೆ ಅಕ್ಟೋಬರ್ 31ರಂದು ಗುರುಗಾಂವ್‌ನ ಹೋಟೆಲ್ ಹಯಾತ್ ರೀಜೆನ್ಸಿಯಲ್ಲಿ ಚುನಾವಣೆ ನಡೆಯಲಿದೆ. 16 ರಾಜ್ಯಗಳ ಅಥ್ಲೆಟಿಕ್ ಸಂಸ್ಥೆಗಳು ತಲಾ ಒಬ್ಬರ ಹೆಸರು ಕಳುಹಿಸಿದ್ದು ದೆಹಲಿ, ಆಂಧ್ರಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳಿಂದ ತಲಾ ಎರಡು ಹೆಸರುಗಳನ್ನು ಕಳುಹಿಸಲಾಗಿದೆ. ಒಂದು ಕಾರ್ಯಕಾರಿ ಸದಸ್ಯರ ಹುದ್ದೆಗೆ ಯಾವ ರಾಜ್ಯದಿಂದಲೂ ಹೆಸರು ಬಂದಿಲ್ಲ.

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಆದಿಲೆ ಜೆ.ಸುಮರಿವಾಲಾ ಹೆಸರನ್ನು ಮಹಾರಾಷ್ಟ್ರ ಅಥ್ಲೆಟಿಕ್ಸ್ ಸಂಸ್ಥೆ ಶಿಫಾರಸು ಮಾಡಿದೆ. ಎರಡನೇ ಅತ್ಯುನ್ನತ ಹುದ್ದೆಯಾದ ಹಿರಿಯ ಉಪಾಧ್ಯಕ್ಷರ ಸ್ಥಾನದ ಅಭ್ಯರ್ಥಿಯಾಗಿ ಅಂಜು ಬಾಬಿ ಅವರ ಹೆಸರು ಇದೆ. ಈ ಹುದ್ದೆಗೆ ಪ್ರತಿಸ್ಪರ್ಧಿ ಇಲ್ಲದ ಕಾರಣ ಅಂಜು ಆಯ್ಕೆ ಖಚಿತವಾಗಿದೆ. ದಕ್ಷಿಣದ ಇತರ ರಾಜ್ಯಗಳಾದ ಕೇರಳದಿಂದ ಬಾಬು ಪಿ.ಐ, ತಮಿಳುನಾಡಿನಿಂದ ಸಿ.ಲತಾ, ಆಂಧ್ರಪ್ರದೇಶದಿಂದ ‌ಎ.ವಿ.ರಾಘವೇಂದ್ರ (ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ) ಮತ್ತು ಎ.ಹೈಮಾ (ಕಾರ್ಯಕಾರಿ ಸಮಿತಿಗೆ) ಹೆಸರನ್ನು ಕಳುಹಿಸಲಾಗಿದೆ.

ADVERTISEMENT

ಕರ್ನಾಟಕದಲ್ಲಿ ಹೆಸರು ಮಾಡಿರುವ ಸಾಕಷ್ಟು ಅಥ್ಲೀಟ್‌ಗಳು ಮತ್ತು ಆಡಳಿತಗಾರರು ಇರುವಾಗ ಕೇರಳದ ಅಥ್ಲೀಟ್ ಒಬ್ಬರ ಹೆಸರು ಶಿಫಾರಸು ಮಾಡಿರುವುದು ಸರಿಯಲ್ಲ ಎಂಬುದು ಅಂಜು ಆಯ್ಕೆ ವಿರೋಧಿಸುವವರ ವಾದ. ದಾವಣಗೆರೆ, ಹಾವೇರಿ, ರಾಮನಗರ ಮುಂತಾದ ಜಿಲ್ಲೆಗಳಿಂದ ಎಎಫ್‌ಐಗೆ ಈಗಾಗಲೇ ಪತ್ರ ಕಳುಹಿಸಲಾಗಿದೆ. ಕ್ರೀಡಾಜೀವನದ ಪೂರ್ತಿ ಕೇರಳವನ್ನು ಪ್ರತಿನಿಧಿಸಿರುವ ಮತ್ತು ಈಚೆಗೆ ಕೇರಳ ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿರುವ ಅಂಜು ಅವರ ಹೆಸರನ್ನು ಯಾವ ಆಧಾರದಲ್ಲಿ ಶಿಫಾರಸು ಮಾಡಲಾಗಿದೆ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. ಪತ್ರದ ಪ್ರತಿಯನ್ನು ಕೆಎಎಗೂ ಕಳುಹಿಸಲಾಗಿದೆ.

ನಿಯಮ ಏನು ಹೇಳುತ್ತದೆ?

ಆಯ್ಕೆ ಬಯಸುವವರನ್ನು ಎಎಫ್‌ಐಯಲ್ಲಿ ಲೀನವಾಗಿರುವ ಯಾವುದಾದರೂ ಸಂಸ್ಥೆ ಶಿಫಾರಸು ಮಾಡಬೇಕು. ಆ ಸಂಸ್ಥೆಯ ಹೆಸರು ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳ ಪಟ್ಟಿಯಲ್ಲಿ ಇರಬೇಕು ಎಂದಷ್ಟೇ ಎಎಫ್‌ಐ ಚುನಾವಣೆಯ ಅಧಿಸೂಚನೆಯಲ್ಲಿ ತಿಳಿಸಿದೆ.

ಒಲಿಂಪಿಯನ್ ನಮ್ಮ ರಾಜ್ಯದಲ್ಲಿ ಇಲ್ಲವೇ...?

‘ರಾಜ್ಯ ಅಥ್ಲೆಟಿಕ್ ಸಂಸ್ಥೆಯಲ್ಲಿ ಯಾವುದೇ ಹುದ್ದೆ ಇಲ್ಲದ ಕೆಲವರು ಸುಮ್ಮನೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಕೆಎಎ ಆಡಳಿತಕ್ಕೆ ಲಂಗು–ಲಗಾಮು ಇಲ್ಲದಂತಾಗಿದೆ. ರಾಜ್ಯದ ಬೇರೆ ಯಾರ ಹೆಸರನ್ನಾದರೂ ಶಿಫಾರಸು ಮಾಡಬಹುದಾಗಿತ್ತು. ಯಾವುದೋ ಲಾಭದ ಉದ್ದೇಶದಿಂದ ಅಂಜು ಹೆಸರನ್ನು ಕಳುಹಿಸಲಾಗಿದೆ’ ಎಂದು ದಾವಣಗೆರೆ ಘಟಕದ ಕಾರ್ಯದರ್ಶಿ ಆರ್.ನಟರಾಜನ್ ದೂರಿದರು. ‘ಅಂಜು ಒಲಿಂಪಿಯನ್ ಆಗಿರುವುದರಿಂದ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಕೆಎಎ ಪದಾಧಿಕಾರಿಗಳು ಹೇಳಿದ್ದಾರೆ. ಒಲಿಂಪಿಯನ್ ಆಗಿರುವ, ಅಥ್ಲೆಟಿಕ್ಸ್‌ನಲ್ಲಿ ಹೆಸರು ಮಾಡಿರುವ ಎಷ್ಟೋ ಮಂದಿ ನಮ್ಮ ರಾಜ್ಯದಲ್ಲಿ ಇದ್ದಾರೆ. ಅವರನ್ನು ಯಾಕೆ ಪರಿಗಣಿಸಲಿಲ್ಲ’ ಎಂದು ರಾಮನಗರ ಜಿಲ್ಲಾ ಘಟಕದ ಕಾರ್ಯದರ್ಶಿ ಉಮೇಶ್ ಬಾಬು ಪ್ರಶ್ನಿಸಿದರು. ‘ಅಂಜು ಯಾವ ಜಿಲ್ಲೆಯಲ್ಲೂ ಪದಾಧಿಕಾರಿ ಅಲ್ಲ. ಬೇರೆ ರಾಜ್ಯದವರಾದ ಅವರ ಹೆಸರು ಶಿಫಾರಸು ಮಾಡಿದ್ದು ಸರ್ವಥಾ ಸರಿಯಲ್ಲ’ ಎಂದು ಹಾವೇರಿ ಘಟಕದ ಕಾರ್ಯದರ್ಶಿ ಬಸವರಾಜ ಹಾಲಪ್ಪನವರ ಹೇಳಿದರು.

***

ಅಂಜು ಬಾಬಿ ಜಾರ್ಜ್ ಅವರು ಹೆಸರಾಂತ ಲಾಂಗ್ ಜಂಪ್ ಪಟು. ಬೆಂಗಳೂರಿನಲ್ಲಿ ವಾಸವಾಗಿರುವ ಅವರು ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಘಟಕವೊಂದರ ಉಪಾಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರ ಹೆಸರನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.

ರಾಜವೇಲು ಕೆಎಎ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.