ADVERTISEMENT

ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಇಂದಿನಿಂದ: ಕಣದಲ್ಲಿ ಅನ್ಮೋಲ್, ಚಿರಾಗ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 0:37 IST
Last Updated 18 ಡಿಸೆಂಬರ್ 2024, 0:37 IST
<div class="paragraphs"><p>ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಯ ಕೋರ್ಟ್‌ನಲ್ಲಿ ಅಭ್ಯಾಸನಿರತ ಆಟಗಾರರು&nbsp;</p></div>

ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಯ ಕೋರ್ಟ್‌ನಲ್ಲಿ ಅಭ್ಯಾಸನಿರತ ಆಟಗಾರರು 

   

–ಪ್ರಜಾವಾಣಿ ಚಿತ್ರ/ವಿ. ಪುಷ್ಕರ್

ಬೆಂಗಳೂರು: ದೇಶದ ಬ್ಯಾಡ್ಮಿಂಟನ್ ಕ್ರೀಡೆಯ ಉದಯೋನ್ಮುಖ ಪ್ರತಿಭೆ ಅನ್ಮೋಲ್ ಖರ್ಬ್, ಮಿಥುನ್ ಮಂಜುನಾಥ್  ಮತ್ತು ಚಿರಾಗ್ ಸೇನ್ ಅವರು ಬುಧವಾರ ಆರಂಭವಾಗಲಿರುವ  ಯಾನೆಕ್ಸ್‌–ಸನ್‌ರೈಸ್ 77ನೇ ಅಂತರರಾಜ್ಯ, ಅಂತರ ವಲಯ ಮತ್ತು 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. 

ADVERTISEMENT

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಬಿಎ) ಮೂರನೇ ಬಾರಿ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಇದೇ 24ರವರೆಗೆ ನಡೆಯುವ ಟೂರ್ನಿಯಲ್ಲಿ ದೇಶದ ಎಲ್ಲ ರಾಜ್ಯಗಳ ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ರೈಲ್ವೆಸ್, ಸರ್ವಿಸಸ್, ಎಲ್‌ಐಸಿ ಸಂಸ್ಥೆಗಳ ತಂಡಗಳು ಕಣದಲ್ಲಿವೆ. ಹೋದ ವರ್ಷದ ಟೂರ್ನಿಯ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಚಿರಾಗ್ ಸೇನ್ ಮತ್ತು ಮಹಿಳೆಯರ ಚಾಂಪಿಯನ್ ಅನ್ಮೋಲ್ ಸೇರಿದಂತೆ   ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 

‘18 ಮತ್ತು 19ರಂದು ಅಂತರ ವಲಯ ಟೀಮ್ ಚಾಂಪಿಯನ್‌ಷಿಪ್, 20ರಿಂದ 24ರವರೆಗೆ ವೈಯಕ್ತಿಕ ಚಾಂಪಿಯನ್‌ಷಿಪ್ ಪಂದ್ಯಗಳು ನಡೆಯಲಿವೆ. ಸಿಂಗಲ್ಸ್‌, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಬಹುಮಾನದ ಮೊತ್ತವು ಒಟ್ಟು ₹ 50 ಲಕ್ಷ ನೀಡಲಾಗುವುದು. ಅದರಲ್ಲಿ ತಂಡ ಚಾಂಪಿಯನ್‌ಷಿಪ್‌ಗೆ ₹ 10 ಲಕ್ಷ, ವೈಯಕ್ತಿಕ ವಿಭಾಗಕ್ಕೆ ₹ 40 ಲಕ್ಷ ನಿಗದಿಪಡಿಸಲಾಗಿದೆ’ ಎಂದು ಕೆಬಿಎ ಅಧ್ಯಕ್ಷ ಮನೋಜಕುಮಾರ್ ಹೊಸಪೇಟಿಮಠ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಟೂರ್ನಿಯು ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ರ‍್ಯಾಂಕಿಂಗ್ ಪಟ್ಟಿಯಲ್ಲಿರುವ ಭಾರ್ಗವ್, ಚಿರಾಗ್, ಆರ್ಯನ್, ಭರತ್, ಅದಿತಿ ರಾವ್, ಇಶಾ ರಾಣ, ಕರ್ನಾಟಕದ ಸದೀಪ್, ಮಿಥುನ್ ಮಂಜುನಾಥ್, ತಾನ್ಯಾ, ಅಶ್ವಿನಿ ಭಟ್, ಶಿಖಾ ಗೌತಮ್ ಅವರು ಕಣದಲ್ಲಿದ್ದಾರೆ’ ಎಂದರು. 

‘ರಾಜ್ಯದಲ್ಲಿ ಮೂರನೇ ಬಾರಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. 2006ರಲ್ಲಿ ಮತ್ತು 2012ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಇಲ್ಲಿ ಆಯೋಜನೆಯಾಗಿದ್ದವು. ಆಗ ಸೈನಾ ನೆಹ್ವಾಲ್, ಅಪರ್ಣಾ ಪೋಪಟ್, ಪಿ.ವಿ. ಸಿಂಧು, ಅನೂಪ್ ಶ್ರೀಧರ್ ಅವರಂತಹ ಖ್ಯಾತನಾಮರು ಆಡಿದ್ದರು. ದೇಶದ ಬ್ಯಾಡ್ಮಿಂಟನ್ ರಂಗದಲ್ಲಿ ರಾಜ್ಯವು ಅತ್ಯುನ್ನತ ಸ್ಥಾನದಲ್ಲಿದೆ. ಶ್ರೇಷ್ಠ ಆಟಗಾರರನ್ನು ದೇಶಕ್ಕೆ ಕೊಡುಗೆ ನೀಡದ ಶ್ರೇಯ ನಮ್ಮದಾಗಿದೆ. ಈಗಲೂ 4 ಸಾವಿರಕ್ಕೂ ಹೆಚ್ಚು ಪ್ರತಿಭಾನ್ವಿತರು ರಾಜ್ಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಗ್ರಾಮಾಂತರ ಮಟ್ಟದಲ್ಲಿಯೂ  ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದರು. 

’ಈ ಟೂರ್ನಿಗೆ ₹ 1.5 ಕೋಟಿ ವೆಚ್ಚವಾಗುತ್ತಿದೆ. ಸ್ಪರ್ಧಾಳುಗಳು ಮತ್ತು ಅಧಿಕಾರಿಗಳೆಲ್ಲರಿಗೂ ಅತ್ಯುತ್ತಮವಾದ ಸಾರಿಗೆ, ವಸತಿ ವ್ಯವಸ್ಥೆಗಳನ್ನು ನೀಡಲಾಗುತ್ತಿದೆ’ ಎಂದೂ ಅವರು ಹೇಳಿದರು. 

ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಜೇಶ್, ಉಪಾಧ್ಯಕ್ಷರಾದ ಬಸವರಾಜ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.