ADVERTISEMENT

ಕಾರ್ತಿಕೇಯನ್, ಪದ್ಮಿನಿಗೆ ನಾಲ್ಕನೇ ಸ್ಥಾನ

ಏಷ್ಯನ್ ಬ್ಲಿಟ್ಝ್‌ ಚೆಸ್‌

ಪಿಟಿಐ
Published 11 ಮೇ 2025, 11:39 IST
Last Updated 11 ಮೇ 2025, 11:39 IST
ಚೆಸ್
ಚೆಸ್   

ಅಲ್‌ ಐನ್ (ಯುಎಇ): ಗ್ರ್ಯಾಂಡ್‌ಮಾಸ್ಟರ್‌ ಮುರಳಿ ಕಾರ್ತಿಕೇಯನ್ ಅವರು ಏಷ್ಯನ್ ಬ್ಲಿಟ್ಝ್ ಚಾಂಪಿಯನ್‌ಷಿಪ್‌ನ ಓಪನ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಪದ್ಮಿನಿ ರಾವುತ್‌ ಅವರೂ ನಾಲ್ಕನೇ ಸ್ಥಾನ ಗಳಿಸಿ ಭಾರತದ ಪರ ಉತ್ತಮ ಸಾಧನೆ ತೋರಿದ ಆಟಗಾರ್ತಿ ಎನಿಸಿದರು.

ರಷ್ಯಾವನ್ನು ಪ್ರತಿನಿಧಿಸುತ್ತಿರುವ, ಆದರೆ ಫಿಡೆ ಧ್ವಜದಡಿ ಆಡಿದ 15 ವರ್ಷ ವಯಸ್ಸಿನ ಗ್ರ್ಯಾಂಡ್‌ಮಾಸ್ಟರ್‌ ಇವಾನ್ ಝಮ್ಲಿಯಾನ್‌ಸ್ಕಿಯಾ ಅವರು ಓಪನ್ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದರು. ಈ ಪ್ರತಿಭಾನ್ವಿತ ಆಟಗಾರ 9 ಸುತ್ತುಗಳಿಂದ 8 ಪಾಯಿಂಟ್ಸ್‌ ಕಲೆಹಾಕಿ ಅಜೇಯರಾಗುಳಿದರು. ಇರಾನ್‌ನ 15 ವರ್ಷ ವಯಸ್ಸಿನ ಸಿನಾ ಮೊಹವೆದ್‌ (7.5) ಎರಡನೇ ಮತ್ತು ರಷ್ಯಾದ ರುಡಿಕ್ ಮಕಾರಿನ್ (7) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.‌ ಮುರಳಿ ಸಹ ಏಳು ಪಾಯಿಂಟ್‌ ಪಡೆದರೂ ಕಡಿಮೆ ಟ್ರೈಬ್ರೇಕ್ ಸ್ಕೋರ್‌ ಕಾರಣ ನಾಲ್ಕನೇ ಸ್ಥಾನ ಪಡೆದರು. ಇಷ್ಟೇ ಪಾಯಿಂಟ್‌ ಪಡೆದ ಭಾರತದ ನೀಲಾಶ್‌ ಸಹ (7) ಐದನೇ ಸ್ಥಾನ ಪಡೆದರು.

ಮಾಜಿ ವಿಶ್ವ ಬ್ಲಿಟ್ಝ್ ಚಾಂಪಿಯನ್ ಅಲೆಕ್ಸಾಂಡರ್ ಗ್ಲಿಶ್ಚುಕ್ ಅವರು ಅಗ್ರ ಆರರೊಳಗೆ ಸ್ಥಾನ ಪಡೆಯಲಿಲ್ಲ. ಗ್ರಿಶ್ಚುಕ್‌ ಅವರು ಈ ಚಾಂಪಿಯನ್‌ಷಿಪ್‌ಗೆ ಪತ್ನಿ ಗ್ರ್ಯಾಂಡ್‌ಮಾಸ್ಟರ್‌ ಕ್ಯಾತರಿನಾ ಲಾಗ್ನೊ ಅವರೊಡನೆ ಆಡಲು ಬಂದಿದ್ದರು.

ADVERTISEMENT

ಭಾರತದ ಗ್ರ್ಯಾಂಡ್‌ಮಾಸ್ಟರ್‌, ನಿಹಾಲ್ ಸರಿನ್ ವೇಗದ ಆಟಕ್ಕೆ ಹೆಸರು ಮಾಡಿದ್ದರೂ, ಈ ವಿಭಾಗದಲ್ಲಿ ಆಡದಿರಲು ನಿರ್ಧರಿಸಿದರು.

ಮಹಿಳೆಯರ ವಿಭಾಗದಲ್ಲಿ, ಕಜಕಸ್ತಾನದ ಅಲುವಾ ನುರ್ಮಾನ್ ಮತ್ತು ರಷ್ಯಾದ ವೆಲೆಂಟಿನಾ ಗುನಿನಾ ಅವರು ತಲಾ 7.5 ಪಾಯಿಂಟ್ಸ್ ಕಲೆಹಾಕಿದರೂ, ಟೈಬ್ರೇಕ್ ಆಧಾರತದಲ್ಲಿ ನುರ್ಮಾನ್ ಅಗ್ರಸ್ಥಾನ ಪಡೆದರು. ಚೀನಾ ಯುಕ್ಸಿನ್ ಸಾಂಗ್ ಮತ್ತು ಭಾರತದ ಪದ್ಮಿನಿ ರಾವುತ್ ತಲಾ ಏಳು ಪಾಯಿಂಟ್ಸ್ ಸಂಗ್ರಹಿಸಿದರೂ, ಉತ್ತಮ ಪ್ರೊಗ್ರೆಸಿವ್ ಸ್ಕೋರ್‌ನಿಂದಾಗಿ ಚೀನಾದ ಸ್ಪರ್ಧಿ ಮೂರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.