ADVERTISEMENT

ಸರ್ಫಿಂಗ್‌: ಅಲೆಗಳ ಸವಾಲು ಮೀರಿದ ‘ಕಿಶೋರ’

ಮಹಿಳೆಯರ ಸೆಮಿಫೈನಲ್‌ ಮಳೆಯಿಂದಾಗಿ ಮುಂದೂಡಿಕೆ; ಕರ್ನಾಟಕ, ತಮಿಳುನಾಡು ಮೇಲುಗೈ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 14:57 IST
Last Updated 1 ಜೂನ್ 2023, 14:57 IST
16 ವರ್ಷದೊಳಗಿನವರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ತಮಿಳುನಾಡಿನ ಕಿಶೋರ್ ಕುಮಾರ್ ಸರ್ಫ್ ಮಾಡಿದ ಭಂಗಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
16 ವರ್ಷದೊಳಗಿನವರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ತಮಿಳುನಾಡಿನ ಕಿಶೋರ್ ಕುಮಾರ್ ಸರ್ಫ್ ಮಾಡಿದ ಭಂಗಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್   

ಮಂಗಳೂರು: ಮೋಡ ಕವಿದ ವಾತಾವರಣದಲ್ಲಿ ಗಾಳಿಯ ವೇಗ ಮತ್ತು ತೆರೆಗಳ ಸವಾಲು ಮೀರಿದ 16 ವರ್ಷದೊಳಗಿನ ವಿಭಾಗದ ಸರ್ಫರ್, ಚೆನ್ನೈನ ಕಿಶೋರ್ ಕುಮಾರ್ ಇಲ್ಲಿನ ಮೂಲ್ಕಿ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಗುರುವಾರ ಸಂಚಲನ ಉಂಟುಮಾಡಿದರು.

ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯಧಿಕ 12.67 ‍ಪಾಯಿಂಟ್ ಕಲೆ ಹಾಕಿದ ಕಿಶೋರ್ 16 ವರ್ಷದೊಳಗಿನವರ ಬಾಲಕರ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು. ತಯಿನ್ ಅರುಣ್ (10.83 ಪಾಯಿಂಟ್‌), ದಿನೇಶ್ ಸೆಲ್ವಮಣಿ (9.53), ಶೇಖರ್ ಪಚಾಯಿ (9), ಹರೀಸ್ ಪಿ (8.63) ಮತ್ತು ಸೆಲ್ವಂ ಎಂ (8.53) ಕೂಡ ಉತ್ತಮ ಸಾಮರ್ಥ್ಯ ತೋರಿದರು.

ಚಾಂಪಿಯನ್‌ಷಿಪ್‌ನ ನಾಲ್ಕನೇ ಆವೃತ್ತಿಯ ಸ್ಪರ್ಧೆಗಳ ಮೊದಲ ದಿನ ಪುರುಷರ ಮತ್ತು 16 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಫರ್‌ಗಳು ಮೇಲುಗೈ ಸಾಧಿಸಿದ್ದು ಮಹಿಳೆಯರ ವಿಭಾಗದ ಸೆಮಿಫೈನಲ್‌ ಸ್ಪರ್ಧೆಯನ್ನು ಮಳೆಯಿಂದಾಗಿ ಶುಕ್ರವಾರಕ್ಕೆ ಮುಂದೂಡಲಾಯಿತು. ಪುರುಷರ ವಿಭಾಗದಲ್ಲಿ 12 ಸರ್ಫರ್‌ಗಳು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಕಳೆದ ವರ್ಷದ ರ‍್ಯಾಂಕಿಂಗ್ ಆಧಾರದಲ್ಲಿ ನೇರವಾಗಿ ಎರಡನೇ ಸುತ್ತು ತಲುಪಿರುವ 16 ಮಂದಿಯನ್ನು ಈ 12 ಮಂದಿ ಶುಕ್ರವಾರ ಎದುರಿಸಲಿದ್ದು ಕ್ವಾರ್ಟರ್ ಫೈನಲ್‌ ಪ್ರವೇಶಿಸಲು ಪ್ರಯತ್ನಿಸಲಿದ್ದಾರೆ.  

ADVERTISEMENT

ಬಾಲಕರ ವಿಭಾಗದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಫರ್‌ಗಳ ನಡುವೆ ತುರುಸಿನ ಸ್ಪರ್ಧೆ ಇತ್ತು. ಎರಡೂ ರಾಜ್ಯಗಳ ತಲಾ ನಾಲ್ವರು ಮುಂದಿನ ಹಂತಕ್ಕೆ ಲಗ್ಗೆ ಇರಿಸಿದರು.  

16 ವರ್ಷದೊಳಗಿನವರ ವಿಭಾಗದಲ್ಲಿ ಶೇಖರ್‌ ಪಚಾಯ್‌ ಮುನ್ನುಗ್ಗಿದ ಪರಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
16 ವರ್ಷದೊಳಗಿನವರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ತಮಿಳುನಾಡಿನ ಕಿಶೋರ್ ಕುಮಾರ್ ಮುನ್ನುಗ್ಗಿದ ರೀತಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

Quote - ಇಲ್ಲಿ ತೋರಿದ ಸಾಮರ್ಥ್ಯದಲ್ಲಿ ತೃಪ್ತಿ ಇಲ್ಲ. ಹವಾಮಾನದಲ್ಲಿ ಆದ ಬದಲಾವಣೆಗಳಿಂದಾಗಿ ಸ್ಪರ್ಧೆ ಸವಾಲಿನಿಂದ ಕೂಡಿತ್ತು. ಸೆಮಿಫೈನಲ್ ಪ್ರವೇಶಿಸಿದ್ದರಲ್ಲಿ ಖುಷಿ ಇದೆ. ಶುಕ್ರವಾರ ಉತ್ತಮ ಸಾಧನೆ ಮಾಡುವ ಭರವಸೆ ಇದೆ. –ಕಿಶೋರ್ ಕುಮಾರ್‌ ಬಾಲಕರ ವಿಭಾಗದ ಸ್ಪರ್ಧಿ

Quote - ಮೊದಲ ದಿನ ಸವಾಲಿನದ್ದಾಗಿತ್ತು. ಎಂಟರ ಘಟ್ಟ ಪ್ರವೇಶಿಸುವುದಕ್ಕಾಗಿ ಎರಡನೇ ಸುತ್ತಿನಲ್ಲಿ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದ್ದು ನಾನು ಸಹಜ ಶೈಲಿಯಲ್ಲಿ ಸರ್ಫ್ ಮಾಡಿ ಮುಂದೆ ಸಾಗುವ ಭರವಸೆಯಲ್ಲಿದ್ದೇನೆ.‌ –ದಿನೇಶ್ ಸೆಲ್ವಮಣಿ ಪುರುಷರ ವಿಭಾಗದ ಸ್ಪರ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.