ADVERTISEMENT

ಹಿಂದೆ ಸರಿದ ರವಿ ದಹಿಯಾ

ಕುಸ್ತಿ: ಸೆಮಿಫೈನಲ್‌ಗೆ ಪಂಕಜ್‌, ಮುಲಾಯಂ

ಪಿಟಿಐ
Published 4 ಜೂನ್ 2023, 13:26 IST
Last Updated 4 ಜೂನ್ 2023, 13:26 IST

ಬಿಷ್ಕೆಕ್‌ : ಭಾರತದ ಕುಸ್ತಿಪಟು ರವಿ ದಹಿಯಾ ಅವರು ಮಂಡಿನೋವಿನ ಕಾರಣ ಯುಡಬ್ಲ್ಯುಡಬ್ಲ್ಯು ರ್‍ಯಾಂಕಿಂಗ್‌ ಸಿರೀಸ್‌ ಕುಸ್ತಿ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ.

ಪುರುಷರ 61 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಅವರು ಭಾನುವಾರ ಮೊದಲ ಸುತ್ತಿನಲ್ಲಿ ಕಿರ್ಗಿಸ್ತಾನದ ತೈರ್‌ಬೆಕ್ ಜುಮಶ್‌ಬೆಕ್‌ ಅವರನ್ನು ಎದುರಿಸಬೇಕಿತ್ತು. ಆದರೆ ಹಣಾಹಣಿಗಾಗಿ ತಾಲೀಮು ನಡೆಸುತ್ತಿದ್ದಾಗ ಮಂಡಿಯಲ್ಲಿ ನೋವು ಕಾಣಿಸಿಕೊಂಡಿದೆ.

‘ಈ ವರ್ಷದ ಜನವರಿಯಲ್ಲಿ ಬಲ ಮಂಡಿಯ ಗಾಯಕ್ಕೆ ಒಳಗಾಗಿದ್ದ ರವಿ, ಚೇತರಿಸಿಕೊಂಡಿದ್ದರು. ಆದರೆ ಭಾನುವಾರ ತಾಲೀಮು ಕೈಗೊಂಡಿದ್ದಾಗ ಅದೇ ಮಂಡಿಯಲ್ಲಿ ನೋವು ಕಾಣಿಸಿಕೊಂಡಿದೆ. ಏಷ್ಯನ್‌ ಕ್ರೀಡಾಕೂಟದ ಟ್ರಯಲ್ಸ್‌ಗೆ ಕೆಲವೇ ದಿನಗಳಿರುವುದರಿಂದ ಗಾಯ ಉಲ್ಬಣಿಸಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಈ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರು’ ಎಂದು ಭಾರತ ಕೋಚಿಂಗ್‌ ತಂಡದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ಬೆಲ್‌ಗ್ರೇಡ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ ಬಳಿಕ ರವಿ ಅವರ ಮೊದಲ ಅಂತರರಾಷ್ಟ್ರೀಯ ಕೂಟ ಇದಾಗಿತ್ತು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಆರನೇ ಸ್ಥಾನ ಗಳಿಸಿದ್ದರು.

ಸೆಮಿಗೆ ಪಂಕಜ್‌: ಪುರುಷರ 61 ಕೆ.ಜಿ. ವಿಭಾಗದಲ್ಲಿ ನಡೆದ ‘ಆಲ್‌ ಇಂಡಿಯನ್‌’ ಕ್ವಾರ್ಟರ್‌ ಫೈನಲ್‌ನಲ್ಲಿ ಪಂಕಜ್‌ ಅವರು 23 ವರ್ಷದೊಳಗಿನ ವಿಶ್ವ ಚಾಂಪಿಯನ್‌ ಅಮನ್‌ ಸೆಹ್ರಾವತ್‌ಗೆ ಆಘಾತ ನೀಡಿದರು. ಬಿಗಿಪಟ್ಟುಗಳಿಂದ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಪಂಕಜ್‌, 8–1 ರಲ್ಲಿ ಗೆದ್ದರು.

ಮುಲಾಯಂ ಯಾದವ್ 70 ಕೆ.ಜಿ. ವಿಭಾಗದ ನಾಲ್ಕರಘಟ್ಟ ಪ್ರವೇಶಿಸಿದರು. ಅವರು ಮೊದಲ ಸುತ್ತಿನಲ್ಲಿ 9–4 ರಲ್ಲಿ ಕಜಕಸ್ತಾನದ ದೋಶನ್ ಅಸೆತೊವ್‌ ವಿರುದ್ಧ ಗೆದ್ದರೆ, ಆ ಬಳಿಕ ಜಾರ್ಜಿಯದ ದವಿತ್ ಪಟ್ಸಿನಶ್ವಿಲಿ ಅವರನ್ನು 6–4 ರಲ್ಲಿ ಮಣಿಸಿದರು.

65 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಅನುಜ್ ಕುಮಾರ್ ಪ್ರಬಲ ಪೈಪೋಟಿ ಒಡ್ಡಿದರೂ 6–7 ರಲ್ಲಿ ಅಜರ್‌ಬೈಜಾನ್‌ನ ಅಲಿ ರಹೀಂಜಾದ ಎದುರು ಪರಾಭವಗೊಂಡರು.

ಭಾರತವು ಪುರುಷರ 74 ಕೆ.ಜಿ, 79 ಕೆ.ಜಿ ಮತ್ತು 92 ಕೆ.ಜಿ. ವಿಭಾಗಗಳಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸಿಲ್ಲ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.