ADVERTISEMENT

ಲಕ್ಷ್ಯಸೇನ್‌ಗೆ ಪ್ರಶಸ್ತಿ

ಬಾಂಗ್ಲಾದೇಶ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಂಡ್ಮಿಂಟನ್‌

ಪಿಟಿಐ
Published 15 ಡಿಸೆಂಬರ್ 2019, 15:59 IST
Last Updated 15 ಡಿಸೆಂಬರ್ 2019, 15:59 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಢಾಕಾ : ಭಾರತದ ಉದಯೋನ್ಮುಖ ತಾರೆ ಲಕ್ಷ್ಯ ಸೇನ್‌ ಅವರು ಬಾಂಗ್ಲಾದೇಶ ಇಂಟರ್‌ನ್ಯಾಷನಲ್‌ ಚಾಲೆಂಜರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 18 ವರ್ಷ ವಯಸ್ಸಿನ ಲಕ್ಷ್ಯ 22–20, 21–18 ನೇರ ಗೇಮ್‌ಗಳಿಂದ ಮಲೇಷ್ಯಾದ ಲಯೊಂಗ್‌ ಜುನ್‌ ಹಾವೊ ಅವರನ್ನು ಪರಾಭವಗೊಳಿಸಿದರು.

ಇದರೊಂದಿಗೆ ಈ ಋತುವಿನಲ್ಲಿ ಐದನೇ ಪ್ರಶಸ್ತಿ ಗೆದ್ದ ಸಾಧನೆಯನ್ನೂ ಮಾಡಿದರು. ಲಕ್ಷ್ಯ ಅವರು ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಬೆಲ್ಜಿಯಂ ಓಪನ್‌ನಲ್ಲಿ ಮೊದಲ ಪ್ರಶಸ್ತಿ ಗೆದ್ದಿದ್ದರು. ನಂತರ ಡಚ್‌ ಓಪನ್‌ ಸೂಪರ್‌ 100, ಸ್ಕಾಟಿಷ್‌ ಓಪನ್‌ ಹಾಗೂ ಸಾರ್‌ಲೋರ್‌ ಲಕ್ಸ್‌ ಸೂಪರ್‌ 100 ಟೂರ್ನಿಗಳಲ್ಲೂ ಚಾಂಪಿಯನ್‌ ಆಗಿದ್ದರು.

ADVERTISEMENT

‘ಈ ಋತುವಿನ ಅಂತ್ಯದಲ್ಲಿ ಪ್ರಶಸ್ತಿ ಗೆದ್ದಿರುವುದರಿಂದ ಅತೀವ ಖುಷಿಯಾಗಿದೆ. ಮುಂದಿನ ವರ್ಷವೂ ಅಮೋಘ ಆಟ ಆಡಿ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲಲು ಪ್ರಯತ್ನಿಸುತ್ತೇನೆ’ ಎಂದು ಲಕ್ಷ್ಯ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಲಕ್ಷ್ಯ ಮೊದಲ ಗೇಮ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ಆದರೆ ನಿರ್ಣಾಯಕ ಹಂತದಲ್ಲಿ ಛಲದಿಂದ ಹೋರಾಡಿ ಗೇಮ್‌ ಕೈವಶ ಮಾಡಿಕೊಂಡರು.

ಎರಡನೇ ಗೇಮ್‌ನ ಮೊದಲಾರ್ಧದಲ್ಲೂ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ವಿರಾಮದ ನಂತರ ಮಿಂಚಿದ ಲಕ್ಷ್ಯ, ಬಲಿಷ್ಠ ಸ್ಮ್ಯಾಷ್‌ ಮತ್ತು ಚುರುಕಿನ ಸರ್ವ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಸಂಭ್ರಮಿಸಿದರು.

ಮನೀಷಾ–ರುತುಪರ್ಣಾ ರನ್ನರ್‌ ಅಪ್‌: ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಕೆ.ಮನೀಷಾ ಮತ್ತು ರುತುಪರ್ಣಾ ಪಾಂಡಾ ಅವರು ರನ್ನರ್ಸ್‌ ಅಪ್‌ ಆದರು.

ಫೈನಲ್‌ನಲ್ಲಿ ಮನೀಷಾ ಮತ್ತು ರುತುಪರ್ಣಾ 20–22, 19–21ಯಿಂದ ಮಲೇಷ್ಯಾದ ಟಾನ್‌ ಪಿಯೆರ್ಲಿ ಕೂಂಗ್‌ ಲೀ ಮತ್ತು ತಿನಾಹ್‌ ಮುರಳೀಧರನ್‌ ವಿರುದ್ಧ ಪರಾಭವಗೊಂಡರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿ ಹಿಡಿದಿದ್ದ ಎಂ.ಆರ್‌.ಅರ್ಜುನ್‌ ಮತ್ತು ಧ್ರುವ ಕಪಿಲಾ ಅವರೂ ರನ್ನರ್ಸ್‌ ಅಪ್‌ ಆದರು.

ಪ್ರಶಸ್ತಿ ಸುತ್ತಿನಲ್ಲಿ ಅರ್ಜುನ್‌ ಮತ್ತು ಧ್ರುವ 19–21, 16–21ರಲ್ಲಿ ಮಲೇಷ್ಯಾದ ನಾಲ್ಕನೇ ಶ್ರೇಯಾಂಕದ ಆಟಗಾರರಾದ ಯೀ ಜುನ್‌ ಚಾಂಗ್‌ ಮತ್ತು ಕಾಯ್‌ ವುನ್‌ ತೀ ವಿರುದ್ಧ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.