ADVERTISEMENT

ಅಂತರರಾಷ್ಟ್ರೀಯ ಪ್ರತಿಭೆಯ ಕರುಳು ಹಿಂಡುವ ಕಥೆ: ಕಾಡುತ್ತಿದೆ ‘ಕ್ರಾನ್ಸ್‌’ ಕಾಯಿಲೆ

ಟೇಕ್ವಾಂಡೊ: ಅಂತರರಾಷ್ಟ್ರೀಯ ಮಟ್ಟದ ಬಾಲ ಪ್ರತಿಭೆಗೆ ಕಾಡಿರುವ ಕ್ರಾನ್ಸ್‌ ಕಾಯಿಲೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 12:04 IST
Last Updated 1 ಸೆಪ್ಟೆಂಬರ್ 2018, 12:04 IST
ಲವಣ್‌
ಲವಣ್‌   

ಬೆಂಗಳೂರು: ಸಣ್ಣ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದ ಟೇಕ್ವಾಂಡೊ ಪಟು ಲವಣ್‌ ಕರುಣಾಜನಕ ಕಥೆ ಇದು. ಐದನೇ ವಯಸ್ಸಿನಲ್ಲಿ ಟೇಕ್ವಾಂಡೊ ಅಭ್ಯಾಸ ಮಾಡತೊಡಗಿದ್ದ ಲವಣ್‌ ಮೂರು ವರ್ಷಗಳಲ್ಲಿ ವಿಶ್ವಮಟ್ಟದ ವಿವಿಧ ಚಾಂಪಿಯನ್‌ಷಿಪ್‌ಗಳ ಸಬ್‌ ಜೂನಿಯರ್ ವಿಭಾಗದಲ್ಲಿ ಪದಕಗಳನ್ನು ಗೆದ್ದರು. ಆದರೆ ಮಾರಕ ‘ಕ್ರಾನ್ಸ್‌’ ಕಾಯಿಲೆ ಇರುವುದು ಗೊತ್ತಾದ ನಂತರ ತಂದೆ–ತಾಯಿ ತೀವ್ರ ಚಿಂತೆಗೆ ಒಳಗಾದರು.

ಚಿಕಿತ್ಸೆಗಾಗಿ ಸ್ವಂತ ಮನೆಯನ್ನು ಮಾರಿದ ಅವರ ಕೈ ಈಗ ಬರಿದಾಗಿದೆ. ಹೀಗಾಗಿ ಸಹೃದಯರತ್ತ ಸಹಾಯ ಹಸ್ತ ಚಾಚಿದ್ದಾರೆ.

ಬೆಂಗಳೂರಿನ ಅಶೋಕ ನಗರ ನಿವಾಸಿಗಳಾದ ಉದಯಕುಮಾರ್‌ ಮತ್ತು ಚಂದ್ರಲೇಖಾ ಅವರ ಎರಡನೇ ಮಗ ಲವಣ್‌. ಆಗಾಗ ಜ್ವರದಿಂದ ಬಳಲುತ್ತಿದ್ದ ಲವಣ್‌ಗೆ ಕ್ರಾನ್ಸ್ ಇದೆ ಎಂದು ತಿಳಿದದ್ದು ಕಳೆದ ವರ್ಷ. ಕಾಯಿಲೆ ಪತ್ತೆಯಾದ ನಂತರ ಚಿಕಿತ್ಸೆಗಾಗಿ ವೆಚ್ಚ ಮಾಡಿರುವ ಮೊತ್ತ ₹ 40 ಲಕ್ಷ ಮೀರಿದೆ ಎಂದು ಉದಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕ್ರಾನ್ಸ್‌ ವಾಸಿ ಮಾಡುವ ಔಷಧಿ ಇನ್ನೂ ಕಂಡುಹುಡುಕಿಲ್ಲ ಎಂದು ವೈದ್ಯರು ಹೇಳಿದ್ದು ಈಗ ಅದನ್ನು ನಿಯಂತ್ರಣದಲ್ಲಿಡುವುದಕ್ಕಾಗಿ ಪ್ರತಿ ವಾರ ₹ 40,000 ಮೊತ್ತದ ಚುಚ್ಚು ಮದ್ದು ನೀಡಲಾಗುತ್ತಿದೆ. ಇದಕ್ಕೆ ಹಣ ಹೊಂದಿಸುವುದು ಕಷ್ಟವಾಗುತ್ತಿದೆ’ ಎಂದು ಅವರು ಹೇಳಿದರು.

‘ಸದ್ಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಹಣ್ಣಿನ ವ್ಯಾಪಾರ ಮೊದಲಿನಷ್ಟು ನಡೆಯುತ್ತಿಲ್ಲ. ನಿತ್ಯ ಜೀವನ ನಿರ್ವಹಣೆ ಕಷ್ಟವಾಗುತ್ತಿರುವುದರಿಂದ ಪತ್ನಿಯೂ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಪದಕಗಳನ್ನು ಗೆದ್ದ ನಂತರ ಸರ್ಕಾರದಿಂದ ಪ್ರೋತ್ಸಾಹ ಧನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಯಿತು. ಚಿಕಿತ್ಸಾ ವೆಚ್ಚ ಭರಿಸಲು ಆಗುವುದಿಲ್ಲ ಎಂದು ಸರ್ಕಾರದ ಮೊರೆ ಹೋದೆವು. ₹ 2 ಲಕ್ಷ ಮಂಜೂರು ಆಗಿದೆ. ಆದರೂ ಸಂಕಷ್ಟ ತೀರಲಿಲ್ಲ’ ಎಂದು ಉದಯಕುಮಾರ್ ಹೇಳಿದರು.

‘ರಾತ್ರಿ ತೀವ್ರ ಜ್ವರ ಬರುತ್ತಿತ್ತು. ಬೆಳಿಗ್ಗೆ ಆರಾಮ ಆಗುತ್ತಿದ್ದ. ವೈರಲ್ ಜ್ವರ ಇರಬಹುದು ಎಂದುಕೊಂಡಿದ್ದೆವು. ಎರಡು ಮೂರು ಬಾರಿ ಹೀಗೆ ಆದಾಗ ಕ್ಲಿನಿಕ್‌ಗೆ ಹೋದೆವು. ಆ್ಯಂಟಿಬಯೋಟಿಕ್ ಕೊಟ್ಟರು. ನಂತರವೂ ಹೀಗೆಯೇ ಆದಾಗ ದೊಡ್ಡ ಆಸ್ಪತ್ರೆಗೆ ತೋರಿಸಿದೆವು. ಅಲ್ಲಿ ಕಾಯಿಲೆ ಪತ್ತೆಯಾಯಿತು. ನಮ್ಮ ಬಳಿ ಇದ್ದ ಹಣವೆಲ್ಲ ಖಾಲಿಯಾದ ನಂತರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ನಂತರ ಹೈದರಾಬಾದ್‌ಗೆ ಹೋದೆವು. ಅಲ್ಲಿನ ವೈದ್ಯರು ತುಂಬ ಸಹಾಯ ಮಾಡಿದರು. ಈಗ ಪ್ರತಿ ವಾರ ಚುಚ್ಚುಮದ್ದು ನೀಡಲಾಗುತ್ತಿದೆ. ಇದಕ್ಕೆ ಆರ್ಥಿಕ ನೆರವು ಸಿಗದಿದ್ದರೆ ಮುಂದೇನು ಗತಿ ಎಂಬ ಆತಂಕ ಕರುಳು ಕಿತ್ತು ತಿನ್ನುತ್ತಿದೆ’ ಎಂದು ಚಂದ್ರಲೇಖ ಹೇಳಿದರು.

ಆರ್ಥಿಕ ನೆರವು ನೀಡಬಯಸುವವರು ಉದಯಕುಮಾರ್ ಅವರ ಬ್ಯಾಂಕ್‌ ಖಾತೆಗೆ ಹಣವನ್ನು ಜಮಾ ಮಾಡಬಹುದು.

ಖಾತೆ ವಿವರ: ಬ್ಯಾಂಕ್ ಆಫ್ ಇಂಡಿಯಾ, ರಿಚ್‌ಮಂಡ್‌ ಟೌನ್ ಶಾಖೆ

ಖಾತೆ ಸಂಖ್ಯೆ: 840910110008107

ಐಎಫ್‌ಸಿಎ ಕೋಡ್‌: ಬಿಕೆಐಡಿ 0008409

ಎಂಐಸಿಆರ್‌ ಕೋಡ್‌: 560013009.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.