ADVERTISEMENT

ಕೃತಿ ಭಾರದ್ವಾಜ್‌ಗೆ ಪ್ರಶಸ್ತಿ ‘ಡಬಲ್‌’

ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ: ರಾಘು, ಭಾರ್ಗವ್‌ಗೆ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 17:43 IST
Last Updated 18 ಜುಲೈ 2019, 17:43 IST
ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರ ಸಂಭ್ರಮ (ಕುಳಿತವರು; ಎಡದಿಂದ) ಮಂಗದ್‌ ಲತೀಫ್‌ ಖಾಲಿದ್‌ ಬಾಷಾ, ಎಸ್‌.ಕೆ.ಶ್ರೀಕಾಂತ್‌, ಜಿ.ಕಿರಣ್‌ ಕುಮಾರ್‌, ಜಿ.ಎಂ.ನಿಶ್ಚಿತಾ, ಆದರ್ಶ್‌ ಕುಮಾರ್‌, ಎಸ್‌.ಸಂಜೀತ್‌, ರಿಯಾ ಪಿಳ್ಳೈ ಮತ್ತು ರುತ್‌ ಮಿಶಾ ವಿನೋದ್‌. (ನಿಂತವರು; ಎಡದಿಂದ) ಕೃತಿ ಭಾರದ್ವಾಜ್‌, ಜನನಿ ಅನಂತಕುಮಾರ್‌, ಎಚ್‌.ವಿ.ನಿತಿನ್‌, ರಾಘು ಮರಿಸ್ವಾಮಿ, ವಿ.ಸುಹಾಸ್‌, ಎಸ್‌.ಭಾರ್ಗವ್‌ ಮತ್ತು ಆರ್‌.ಹರೀಶ್‌ –ಪ್ರಜಾವಾಣಿ ಚಿತ್ರ
ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರ ಸಂಭ್ರಮ (ಕುಳಿತವರು; ಎಡದಿಂದ) ಮಂಗದ್‌ ಲತೀಫ್‌ ಖಾಲಿದ್‌ ಬಾಷಾ, ಎಸ್‌.ಕೆ.ಶ್ರೀಕಾಂತ್‌, ಜಿ.ಕಿರಣ್‌ ಕುಮಾರ್‌, ಜಿ.ಎಂ.ನಿಶ್ಚಿತಾ, ಆದರ್ಶ್‌ ಕುಮಾರ್‌, ಎಸ್‌.ಸಂಜೀತ್‌, ರಿಯಾ ಪಿಳ್ಳೈ ಮತ್ತು ರುತ್‌ ಮಿಶಾ ವಿನೋದ್‌. (ನಿಂತವರು; ಎಡದಿಂದ) ಕೃತಿ ಭಾರದ್ವಾಜ್‌, ಜನನಿ ಅನಂತಕುಮಾರ್‌, ಎಚ್‌.ವಿ.ನಿತಿನ್‌, ರಾಘು ಮರಿಸ್ವಾಮಿ, ವಿ.ಸುಹಾಸ್‌, ಎಸ್‌.ಭಾರ್ಗವ್‌ ಮತ್ತು ಆರ್‌.ಹರೀಶ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ಕೈಫಿಂಚ್‌ ಅಕಾಡೆಮಿಯ ಕೃತಿ ಭಾರದ್ವಾಜ್‌, ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ‘ಡಬಲ್‌’ ಸಾಧನೆ ಮಾಡಿದ್ದಾರೆ.

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಅಂಗಳದಲ್ಲಿ ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಕೃತಿ 21–15, 21–18 ನೇರ ಗೇಮ್‌ಗಳಿಂದ ಐ ಸ್ಪೋರ್ಟ್ಸ್‌ನ ಅದ್ವಿಕಾ ಗಣೇಶ್‌ ಅವರನ್ನು ಮಣಿಸಿದರು.

19 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಸುತ್ತಿನಲ್ಲೂ ಕೃತಿ ಮತ್ತು ಅದ್ವಿಕಾ ಮುಖಾಮುಖಿಯಾಗಿದ್ದರು.

ADVERTISEMENT

ಈ ಹಣಾಹಣಿಯಲ್ಲಿ ಕೃತಿ 21–18, 19–21, 21–16ರಲ್ಲಿ ಗೆದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ರಾಘು ಮರಿಸ್ವಾಮಿ ಚಾಂಪಿಯನ್‌ ಆದರು. ಫೈನಲ್‌ನಲ್ಲಿ ರಾಘು 21–14, 21–17ರಲ್ಲಿ ಅಗ್ರಶ್ರೇಯಾಂಕದ ಆಟಗಾರ ಹೇಮಂತ್‌ ಎಂ.ಗೌಡ ಅವರಿಗೆ ಆಘಾತ ನೀಡಿದರು.

ಡಬಲ್ಸ್‌ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ಆದರ್ಶ್‌ ಕುಮಾರ್‌ ಮತ್ತು ಎಸ್‌.ಸಂಜೀತ್‌ 21–19, 21–18ರಲ್ಲಿ ವಸಂತ್‌ ಕುಮಾರ್‌ ಮತ್ತು ಆಶಿತ್‌ ಸೂರ್ಯ ಅವರನ್ನು ಪರಾಭವಗೊಳಿಸಿದರು.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ರಿಯಾ ಪಿಳ್ಳೈ ಮತ್ತು ರುತ್‌ ಮಿಶಾ ವಿನೋದ್‌ ಕಿರೀಟ ಮುಡಿಗೇರಿಸಿಕೊಂಡರು.

ಫೈನಲ್‌ನಲ್ಲಿ ರಿಯಾ ಮತ್ತು ರುತ್‌ ಮಿಶಾ 21–19, 22–20ರಲ್ಲಿ ಪಾರ್ವತಿ ಎಸ್‌.ಕೃಷ್ಣನ್‌ ಮತ್ತು ರಮ್ಯಾ ವೆಂಕಟೇಶ್‌ ವಿರುದ್ಧ ಗೆದ್ದರು.

ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಜಿ.ಕೃಷ್ಣ ಕುಮಾರ್‌ ಮತ್ತು ಜಿ.ಎಂ.ನಿಶ್ಚಿತಾ 21–15, 21–18ರಲ್ಲಿ ಎಚ್‌.ವಿ.ನಿತಿನ್‌ ಮತ್ತು ರಮ್ಯಾ ವೆಂಕಟೇಶ್‌ ಅವರನ್ನು ಸೋಲಿಸಿದರು.

ಭಾರ್ಗವ್‌ ಚಾಂಪಿಯನ್‌: 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ಕೆಬಿಎ ಅಕಾಡೆಮಿಯ ಎಸ್‌.ಭಾರ್ಗವ್‌ ಚಾಂಪಿಯನ್‌ ಆದರು.ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಭಾರ್ಗವ್‌ 21–17, 21–12 ನೇರ ಗೇಮ್‌ಗಳಿಂದ ತೇಜಸ್‌ ಸಂಜಯ್‌ ಕಲ್ಲೋಳಕರ್‌ ಅವರನ್ನು ಮಣಿಸಿದರು. ಡಬಲ್ಸ್‌ ವಿಭಾಗದ ಗರಿ ಎಚ್‌.ವಿ.ನಿತಿನ್‌ ಮತ್ತು ಎಸ್‌.ಭಾರ್ಗವ್‌ ಅವರ ಪಾಲಾಯಿತು.

ಫೈನಲ್‌ನಲ್ಲಿ ನಿತಿನ್‌ ಮತ್ತು ಭಾರ್ಗವ್‌ 21–16, 21–17ರಲ್ಲಿ ಸಿ.ಎಸ್‌.ಸಾಕೇತ್‌ ಮತ್ತು ತೇಜಸ್‌ ಕಲ್ಲೋಳಕರ್‌ ಅವರನ್ನು ಪರಾಭವಗೊಳಿಸಿದರು.

ಬಾಲಕಿಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಜನನಿ ಅನಂತಕುಮಾರ್‌ ಮತ್ತು ತಾನ್ಯಾ ಹೇಮಂತ್ 21–12, 21–15ರಲ್ಲಿ ಅದ್ವಿಕಾ ಗಣೇಶ್‌ ಮತ್ತು ಅನುಷ್ಕಾ ಗಣೇಶ್‌ ಅವರನ್ನು ಮಣಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ವಿ.ಸುಹಾಸ್‌ ಮತ್ತು ಜನನಿ ಅನಂತಕುಮಾರ್‌ ಚಾಂಪಿಯನ್‌ ಆದರು.

ಅಂತಿಮ ಘಟ್ಟದ ಪೈಪೋಟಿಯಲ್ಲಿ ಸುಹಾಸ್‌ ಮತ್ತು ಜನನಿ 21–18, 21–16ರಲ್ಲಿ ಸಿ.ಎಸ್‌.ಸಾಕೇತ್‌ ಮತ್ತು ಡಿ.ಶೀತಲ್‌ ವಿರುದ್ಧ ಗೆದ್ದರು.

45 ವರ್ಷದೊಳಗಿನ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಆರ್‌.ಹರೀಶ್‌ 25–23, 14–21, 21–15ರಲ್ಲಿ ಮೂರನೇ ಶ್ರೇಯಾಂಕದ ಅಶೋಕ್‌ ರಾಮನ್‌ ಅವರನ್ನು ಮಣಿಸಿದರು.

ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಮಂಗದ್‌ ಲತೀಫ್‌ ಖಾಲಿದ್‌ ಬಾಷಾ ಮತ್ತು ಎಸ್‌.ಕೆ.ಶ್ರೀಕಾಂತ್‌ 21–23, 21–16, 21–18ರಲ್ಲಿ ಕಿರಣ್‌ ಕುಮಾರ್‌ ಮತ್ತು ಕೆ.ಎಸ್‌.ಸುನಿಲ್‌ ವಿರುದ್ಧ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.