ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸೈನಾ, ಶ್ರೀಕಾಂತ್‌ಗೆ ಪ್ರಶಸ್ತಿ ಕನಸು

ಇಂದಿನಿಂದ ಅರ್ಹತಾ ಸುತ್ತಿನ ಪಂದ್ಯಗಳು

ಪಿಟಿಐ
Published 14 ಜನವರಿ 2019, 19:45 IST
Last Updated 14 ಜನವರಿ 2019, 19:45 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಕ್ವಾಲಾಲಂಪುರ: ಭಾರತದ ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ವಿಶ್ವ ಟೂರ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಮಂಗಳವಾರದಿಂದ ನಡೆಯಲಿವೆ. ಪಿ.ವಿ.ಸಿಂಧು ಮತ್ತು ಬಿ.ಸಾಯಿ ಪ್ರಣೀತ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಸೈನಾ, ಹೋದ ವರ್ಷ ಹಲವು ಪ್ರಶಸ್ತಿಗಳನ್ನು ಜಯಿಸಿದ್ದರು. ಕಾಮನವ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಿದ್ದರು. ಏಷ್ಯಾ ಕ್ರೀಡಾಕೂಟ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ಗಳಲ್ಲಿ ಕಂಚಿನ ಸಾಧನೆ ಮಾಡಿದ್ದರು. ಜೊತೆಗೆ ಇಂಡೊನೇಷ್ಯಾ ಮಾಸ್ಟರ್ಸ್‌, ಡೆನ್ಮಾರ್ಕ್‌ ಓಪನ್‌ ಮತ್ತು ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದರು.

ADVERTISEMENT

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಸೈನಾ, ಹಾಂಕಾಂಗ್‌ನ ಡೆಂಗ್‌ ಜಾಯ್‌ ಕ್ಸುವಾನ್‌ ವಿರುದ್ಧ ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿರುವ ಶ್ರೀಕಾಂತ್‌, ಬುಧವಾರ ನಡೆಯುವ ಮೊದಲ ಸುತ್ತಿನ ಹಣಾಹಣಿಯಲ್ಲಿ ಹಾಂಕಾಂಗ್‌ನ ನಾಂಗ್ ಕಾ ಲಾಂಗ್‌ ಆಂಗಸ್‌ ಎದುರು ಹೋರಾಡಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ, ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಈ ಜೋಡಿ ಚೀನಾದ ಒವು ಕ್ಸುವಾನಯಿ ಮತ್ತು ರೆನ್‌ ಕ್ಸಿಯಾಂಗ್ಯೂ ಎದುರು ಪೈಪೋಟಿ ನಡೆಸಲಿದೆ.

ಮಹಿಳೆಯರ ಡಬಲ್ಸ್‌ನಲ್ಲಿ ಆಡುತ್ತಿರುವ ಕರ್ನಾಟಕ ಅಶ್ವಿನಿ ‍ಪೊನ್ನಪ್ಪ ಮತ್ತು ಹೈದರಾಬಾದ್‌ನ ಎನ್‌.ಸಿಕ್ಕಿ ರೆಡ್ಡಿ ಅವರೂ ಪ್ರಶಸ್ತಿಯ ಕನಸಿನಲ್ಲಿದ್ದಾರೆ.

ಅಶ್ವಿನಿ ಮತ್ತು ಸಿಕ್ಕಿ ಅವರಿಗೆ ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ನಾಂಗ್‌ ತ್ಸಜ್‌ ಯವು ಮತ್ತು ಯುಯೆನ್‌ ಸಿನ್‌ ಯಿಂಗ್ ಅವರ ಸವಾಲು ಎದುರಾಗಲಿದೆ.

ಮಿಶ್ರ ಡಬಲ್ಸ್‌ನಲ್ಲಿ ಮೈದಾನಕ್ಕಿಳಿಯಲಿರುವ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ಅವರು ಇಂಗ್ಲೆಂಡ್‌ನ ಬೆನ್‌ ಲೇನ್‌ ಮತ್ತು ಜೆಸ್ಸಿಕಾ ಪುಗ್‌ ಎದುರು ಆಡಲಿದ್ದಾರೆ.

ಪರುಪಳ್ಳಿ ಕಶ್ಯಪ್‌, ಅಜಯ್‌ ಜಯರಾಮ್‌, ಶುಭಂಕರ್‌ ಡೇ, ವೈಷ್ಣವಿ ರೆಡ್ಡಿ ಜಕ್ಕಾ ಮತ್ತು ರಿತುಪರ್ಣ ದಾಸ್‌ ಅವರು ಅರ್ಹತಾ ಸುತ್ತಿನಲ್ಲಿ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.