ADVERTISEMENT

Malaysia Masters: ಸಿಂಧು ಮುನ್ನಡೆ; ಸೈನಾಗೆ ನಿರಾಸೆ

ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣೀತ್. ಕಶ್ಯಪ್‌ಗೆ ಜಯ

ಪಿಟಿಐ
Published 6 ಜುಲೈ 2022, 12:27 IST
Last Updated 6 ಜುಲೈ 2022, 12:27 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಕ್ವಾಲಾಲಂಪುರ: ಭಾರತದ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಜಯದ ಆರಂಭ ಮಾಡಿದರು. ಆದರೆ ಸೈನಾ ನೆಹ್ವಾಲ್ ಸತತ ಎರಡನೇ ಟೂರ್ನಿಯಲ್ಲಿ ಮೊದಲ ಸುತ್ತಿನ ತಡೆ ದಾಟುವಲ್ಲಿ ವಿಫಲರಾದರು.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಹಣಾಹಣಿಯಲ್ಲಿ21-13, 17-21, 21-15ರಿಂದ ಚೀನಾದ ಹೆ ಬಿಂಗ್‌ ಜಿಯಾವೊ ಸವಾಲು ಮೀರಿದರು. ಜಿದ್ದಾಜಿದ್ದಿನ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಡೊನೇಷ್ಯಾ ಓಪನ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು. ಆ ಸೆಣಸಾಟದಲ್ಲಿ ಬಿಂಗ್‌ ಜಿಯಾವೊ ನೇರ ಸೆಟ್‌ಗಳಿಂದ ಭಾರತದ ಆಟಗಾರ್ತಿಗೆ ಸೋಲುಣಿಸಿದ್ದರು.

ಲಂಡನ್‌ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ, ಮೊದಲ ಗೇಮ್‌ ಗೆದ್ದುಕೊಂಡರೂ21-16, 17-21, 14-21ರಿಂದ ದಕ್ಷಿಣ ಕೊರಿಯಾದ ಕಿಮ್‌ ಗಾ ಯುನ್ ಎದುರಿನ ಪಂದ್ಯ ಕೈಚೆಲ್ಲಿದರು. ಕಳೆದ ವಾರ ಮಲೇಷ್ಯಾ ಓಪನ್ ಟೂರ್ನಿಯಲ್ಲೂ ಸೈನಾ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ADVERTISEMENT

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ.ಸಾಯಿ ಪ್ರಣೀತ್ ಮತ್ತು ಪರುಪಳ್ಳಿ ಕಶ್ಯಪ್‌ ಕೂಡ ಎರಡನೇ ಸುತ್ತು ತಲುಪಿದರು. ಪ್ರಣೀತ್‌21-8, 21-9ರಿಂದ ಗ್ವಾಟೆಮಾಲಾದ ಕೆವಿನ್ ಕೊರ್ಡಾನ್‌ ಎದುರು ಗೆದ್ದರೆ, ಕಶ್ಯಪ್‌16-21, 21-16, 21-16ರಿಂದ ಇಂಡೊನೇಷ್ಯಾದ ಟಾಮಿ ಸುಗಿಯರ್ತೊ ಅವರನ್ನು ಮಣಿಸಿದರು.

ಸಮೀರ್ ವರ್ಮಾ ಅವರಿಗೆ ಮತ್ತೆ ನಿರಾಸೆ ಕಾಡಿತು. ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು21-10, 12-21, 14-21ರಿಂದ ಚೀನಾ ತೈಪೆಯ ಚೊ ಟಿಯೆನ್‌ ಚೆನ್‌ ಎದುರು ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.