ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸಿಂಧು, ಸಾತ್ವಿಕ್–ಚಿರಾಗ್ ಶುಭಾರಂಭ

ಪಿಟಿಐ
Published 7 ಜನವರಿ 2026, 16:29 IST
Last Updated 7 ಜನವರಿ 2026, 16:29 IST
ಪಿ.ವಿ. ಸಿಂಧು 
ಪಿ.ವಿ. ಸಿಂಧು    

ಕೌಲಾಲಂಪುರ: ದೀರ್ಘ ಸಮಯದ ನಂತರ ಅಂಕಣಕ್ಕೆ ಮರಳಿರುವ ಒಲಿಂಪಿಯನ್ ಪಿ.ವಿ. ಸಿಂಧು ಹಾಗೂ ಚಿರಾಗ್ ಶೆಟ್ಟಿ–ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ  ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್  ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದರು. 

ಹೋದವರ್ಷದ ಅಕ್ಟೋಬರ್‌ನಲ್ಲಿ ಕಾಲಿನ ಗಾಯದ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಸಿಂಧು ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್ ಟೂರ್ನಿಗಳಿಂದ ದೂರವುಳಿದಿದ್ದರು. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಅವರು 21–14, 22–20ರಿಂದ ಚೈನಿಸ್ ತೈಪೆಯ ಸಂಗ್ ಶಾವೊ ಯುನ್ ವಿರುದ್ಧ ಗೆದ್ದರು. ಇದರೊಂದಿಗೆ ಎರಡನೇ ಸುತ್ತು ಪ್ರವೇಶಿಸಿದರು. 

30 ವರ್ಷದ ಸಿಂಧು ಅವರು ಲವಲವಿಕೆಯಿಂದ ಆಡಿದರು. ಗಾಯದಿಂದ ಬಸವಳಿದ ಯಾವುದೇ ಕುರುಹುಗಳಿರಲಿಲ್ಲ. ಚುರುಕಾಗಿ ಆಡಿದ ಅವರು ಎರಡನೇ ಗೇಮ್‌ನಲ್ಲಂತೂ ಟೈಬ್ರೇಕರ್‌ ನಲ್ಲಿ ಗೆದ್ದ ರೀತಿ ಅಮೋಘವಾಗಿತ್ತು. ತುರುಸಿನ ಪೈಪೋಟಿ ಕಂಡ ಗೇಮ್‌ನಲ್ಲಿ ಅವರು ಮೇಲುಗೈ ಸಾಧಿಸಿದರು. ಒಟ್ಟು 51 ನಿಮಿಷಗಳ ಹೋರಾಟದಲ್ಲಿ 18ನೇ ಶ್ರೇಯಾಂಕದ ಸಿಂಧು ಜಯಭೇರಿ ಬಾರಿಸಿದರು. ಈ ಎದುರಾಳಿಯ ವಿರುದ್ಧ ಅವರು ಗೆದ್ದ ಎರಡನೇ ಪಂದ್ಯ ಇದಾಗಿದೆ. 16ರ ಘಟ್ಟದಲ್ಲಿ ಸಿಂಧು ಅವರು ಜಪಾನಿನ 9ನೇ ಶ್ರೇಯಾಂಕದ ಟೊಮೊಕಾ ಮಿಯಾಝಾಕಿ ವಿರುದ್ಧ ಆಡಲಿದ್ದಾರೆ.

ADVERTISEMENT

ಪುರುಷರ ಡಬಲ್ಸ್‌ನಲ್ಲಿ ವಿಶ್ವದ ಅಗ್ರಮಾನ್ಯ ಜೋಡಿ ಸಾತ್ವಿಕ್ ಮತ್ತು ಚಿರಾಗ್ 21-13, 21-15 ರಿಂದ ಚೈನಿಸ್ ತೈಪೆಯ ಯಾಂಗ್ ಪೊ ಸುವಾನ್ ಹಾಗೂ ಲೀ ಝೇ ಹೂ ವಿರುದ್ಧ ಗೆದ್ದರು. 35 ನಿಮಿಷಗಳ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಭಾರತದ ಜೋಡಿಯು ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿತು. 

ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲಾ ಮತ್ತು ತನಿಶಾ ಕ್ರಾಸ್ಟೊ 15-21, 21-18, 15-21 ರಿಂದ ತಮಗಿಂತಲೂ ಕಡಿಮೆ ರ‍್ಯಾಂಕ್‌ನ ಅಮೆರಿಕದ ಪ್ರೆಸ್ಲಿ ಸ್ಮಿತ್  ಮತ್ತು ಜೆನಿ ಗೈ ವಿರುದ್ಧ ಸೋತರು. 

ಮಹಿಳೆಯರ ಡಬಲ್ಸ್‌ನಲ್ಲಿ ತ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು 9-21, 23-21, 19-21ರಿಂದ ಇಂಡೊನೇಷ್ಯಾದ ಫೆಬ್ರಿಯಾನಾ ದ್ವಿಪೂಜಿ ಕುಸುಮಾ ಮತ್ತು ಮೀಲೈಸಾ ಟ್ರಿಯಸ್ ಪುಷ್ಪಿಟಾಸರಿ ಜೋಡಿಯ ವಿರುದ್ಧ ಸೋತರು. ಆದರೆ 66 ನಿಮಿಷ ನಡೆದ ಪಂದ್ಯದಲ್ಲಿ ಭಾರತದ ಜೋಡಿಯು ದಿಟ್ಟ ಪೈಪೋಟಿಯೊಡ್ಡಿತು.

ಪಂಡಾ ಸಹೋದರಿಯರಾದ ಋತುಪರ್ಣ–ಶ್ವೇತಪರ್ಣ 11–21, 9–21 ರಿಂದ ಮಲೇಷ್ಯಾದ ಪರ್ಲಿ ಟ್ಯಾನ್ ಮತ್ತು ತಿನಾಹ್ ಮುರಳೀಧರನ್ ಜೋಡಿಯ ವಿರುದ್ಧ ಸೋತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.