ADVERTISEMENT

13ರಿಂದ ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌

ಕಾಫಿನಾಡಿನ ಗುಡ್ಡಗಾಡಿನಲ್ಲಿ ಓಟಗಾರರ ಕಸರತ್ತು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 16:00 IST
Last Updated 3 ಅಕ್ಟೋಬರ್ 2018, 16:00 IST
ಶ್ಯಾಮ್‌ಸುಂದರ್‌ ಫಣಿ
ಶ್ಯಾಮ್‌ಸುಂದರ್‌ ಫಣಿ   

ಚಿಕ್ಕಮಗಳೂರು: ಕಾಫಿನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಇದೇ 13 ಮತ್ತು 14ರಂದು ಕಾಫಿ ಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌ ನಡೆಯಲಿದ್ದು, ದೇಶವಿದೇಶಗಳ ಓಟಗಾರರು ಭಾಗವಹಿಸಲಿದ್ದಾರೆ.

‘ಮೂರನೇ ಬಾರಿ ನಡೆಯುತ್ತಿರುವ ಮ್ಯಾರಥಾನ್‌ನಲ್ಲಿ ಭಾಗವಹಿಸಲು 1,198 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. 50 ಕಿ.ಮೀ, 80 ಕಿ.ಮೀ,110 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 13ರಂದು ಬೆಳಿಗ್ಗೆ 6 ಗಂಟೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ತರೀಕೆರೆಯ ಲಾಲ್‌ಬಾಗ್‌ನಲ್ಲಿ ಚಾಲನೆ ನೀಡುವರು’ ಎಂದು ಮ್ಯಾರಥಾನ್‌ ನಿರ್ದೇಶಕ ಶ್ಯಾಮ್‌ಸುಂದರ್‌ ಫಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘50 ಕಿ.ಮೀ. ಕ್ರಮಿಸಲು 9 ಗಂಟೆ, 80 ಕಿ.ಮೀ.– 16 ಗಂಟೆ ಮತ್ತು 110 ಕಿ.ಮೀ.– 24 ಗಂಟೆ ಸಮಯ ಮಿತಿ ನಿಗದಿಪಡಿಸಲಾಗಿದೆ. ಲಾಲ್‌ಬಾಗ್‌– ಕತ್ತಲೆಖಾನ್‌– ರಾಜಗಿರಿ– ಧೂಪದಖಾನ್‌, ಕುರುಕುರ್‌ಮಟ್ಟಿ–ಸಂಪಿಗೆಹಟ್ಟಿ ಮಾರ್ಗದಲ್ಲಿ ಸ್ಪರ್ಧಿಗಳು ಸಾಗಬೇಕು. ಕೆರೆದಂಡೆ, ಗುಡ್ಡಗಾಡು, ತಗ್ಗುದಿಣ್ಣೆ, ದುರ್ಗಮ ಹಾದಿಗಳನ್ನು ಕ್ರಮಿಸಬೇಕು’ ಎಂದರು.

ADVERTISEMENT

‘ಬ್ರಿಟನ್‌, ಅಮೆರಿಕ, ಪೋಲೆಂಡ್‌, ಫ್ರಾನ್ಸ್‌, ಮಾಲ್ಡೀವ್ಸ್‌, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಬೆಲ್ಜಿಯಂ, ಸಿಂಗಪುರ, ಕೊಲಂಬಿಯಾ, ಜಪಾನ್‌, ಮಲೇಷ್ಯಾದ 22 ಓಟಗಾರರು ನೋಂದಾಯಿಸಿಕೊಂಡಿದ್ದಾರೆ. ಅಮೆರಿಕದ ಏಳು ಸ್ಪರ್ಧಿಗಳು ಇದ್ದಾರೆ. 1,198 ನೋಂದಾಯಿತರ ಪೈಕಿ 142 ಮಹಿಳೆಯರೂ ಇದ್ದಾರೆ. ಅಂತರರಾಷ್ಟ್ರೀಯ ಓಟಗಾರರಾದ ಲಂಡನ್‌ನ ಜೊಮೆಕ್‌, ಅಮೆರಿಕದ ಹೆಡನ್‌ಹಾಕ್ಸ್‌, ಕೊರಿನ್‌ ಮಲ್ಕಾಮ, ಫ್ರಾನ್ಸ್‌ನ ಟೇಟ್‌ ಪಾಲ್ಮನ್‌, ಕೆನಡಾದ ಮೇರಿ ಹೊಗನ್‌, ಫ್ಲೊರೆಂಟ್‌ ಬೊಗೆಮ್‌ ನೋಂದಾಯಿಸಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

‘50 ಕಿ.ಮೀ. ವಿಭಾಗದಲ್ಲಿ 751 ಮಂದಿ (110 ಮಹಿಳೆಯರು), 80 ಕಿ.ಮೀ. ವಿಭಾಗದಲ್ಲಿ 182 ಮಂದಿ (17 ಮಹಿಳೆಯರು) ಹಾಗೂ 110 ಕಿ.ಮೀ. ವಿಭಾಗದಲ್ಲಿ 265 ಮಂದಿ (15 ಮಹಿಳೆಯರು) ನೋಂದಾಯಿಸಿಕೊಂಡಿದ್ದಾರೆ. ರಕ್ಷಣಾ ಪಡೆ ಮತ್ತು ನೌಕಾ ಪಡೆಯಿಂದ 30 ಮಂದಿ (ತಲಾ 15 ಮಂದಿ) ಇದ್ದಾರೆ. ಕರ್ನಾಟಕದ 385, ತಮಿಳುನಾಡಿನ 315, ಮಹಾರಾಷ್ಟ್ರದ 89 ಮಂದಿ ಇದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.