ಅಮ್ಮಾನ್: ಭಾರತದ ಕುಸ್ತಿಪಟು ಮನೀಶಾ ಭನ್ವಾಲಾ ಅವರು ಶುಕ್ರವಾರ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಯುವ ಕುಸ್ತಿಪಟು ಅಂತಿಮ್ ಪಂಘಲ್ ಕಂಚಿನ ಪದಕ ಗೆದ್ದರು.
ಈ ಮೂಲಕ ಭಾರತದ ಪದಕಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಅದರಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಆರು ಕಂಚು ಸೇರಿವೆ.
2022ರಿಂದ ಸತತ ಮೂರು ಕಂಚಿನ ಪದಕ ಗೆದ್ದಿರುವ 25 ವರ್ಷ ವಯಸ್ಸಿನ ಮನೀಶಾ ಫೈನಲ್ ಹಣಾಹಣಿಯಲ್ಲಿ 8-7 ಅಂತರದಿಂದ ಕೊರಿಯಾದ ಓಕೆ ಜೆ ಕಿಮ್ ಅವರನ್ನು ಮಣಿಸಿದರು. ಇದರೊಂದಿಗೆ 2021ರ ಆವೃತ್ತಿಯ ನಂತರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು.
ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮನೀಶಾ ಒಂದು ಹಂತದಲ್ಲಿ 2-7 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದರು. ನಂತರ ಸತತ ಆರು ಅಂಕಗಳನ್ನು ಕಲೆಹಾಕಿ ಏಷ್ಯನ್
ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನದ ಸಾಧನೆ ಮಾಡಿದರು.
20 ವರ್ಷ ವಯಸ್ಸಿನ ಅಂತಿಮ್ (ಮಹಿಳೆಯರ 53 ಕೆ.ಜಿ ವಿಭಾಗ) ಕಂಚಿನ ಪ್ಲೇ ಆಫ್‌ನಲ್ಲಿ ಚೀನಾ ತೈಪೆಯ ಮೆಂಗ್ ಎಚ್ ಹ್ಸಿಹ್ ವಿರುದ್ಧ ಪ್ರಾಬಲ್ಯ ಸಾಧಿಸಿದರು. ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯ ಸಾಧಿಸಿದರು.
ಫ್ರೀಸ್ಟೈಲ್‌ನಲ್ಲಿ ನಿರಾಸೆ: ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಫ್ರೀಸ್ಟೈಲ್ ಸ್ಪರ್ಧೆ ಶನಿವಾರ ಆರಂಭವಾಗಿದ್ದು, ಮೊದಲ ದಿನ ಭಾರತದ ಐದು ಪೈಲ್ವಾನರು ನಿರಾಸೆ ಅನುಭವಿಸಿದರು.
ಸುಜಿತ್ ಕಲ್ಕಲ್ 65 ಕೆ.ಜಿ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಪ್ಯಾಲೆಸ್ಟೈನ್‌ನ ಅಬ್ದುಲ್ಲಾ ಅಸ್ಸಾಫ್ ಅವರನ್ನು ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು. ಆದರೆ, ಅಲ್ಲಿ ಜಪಾನಿನ ಕೈಸೆಯ್ ತನಬೆ ವಿರುದ್ಧ ಮುಗ್ಗರಿಸಿದರು.
ಜಪಾನ್‌ನ ಕುಸ್ತಿಪಟು ಪ್ರಶಸ್ತಿ ಸುತ್ತು ತಲುಪಿದ್ದರಿಂದ ಸುಜಿತ್ ಅವರಿಗೆ ರೆಪೆಷಾಜ್ ಅವಕಾಶ ದೊರೆಯಿತು. ಆದರೆ, ಭಾರತದ ಪೈಲ್ವಾನ್ ಗಾಯಾಳಾದ ಕಾರಣ ಸ್ಪರ್ಧೆಯಿಂದ ದೂರ ಉಳಿದರು.
65 ಕೆ.ಜಿ ವಿಭಾಗದಲ್ಲಿ ಭಾರತದ ಮತ್ತೊಬ್ಬ ಸ್ಪರ್ಧಿ ವಿಶಾಲ್ ಕಲಿರಾಮನ್ ಮೊದಲ ಸುತ್ತಿನಲ್ಲೇ ಹೊರಬಿದ್ದರು. ವಿಶಾಲ್ 0–8ರಿಂದ 2022ರ ಏಷ್ಯನ್ ಗೇಮ್ಸ್ ಚಾಂಪಿಯನ್ ಮಂಗೋಲಿಯದ ತುಲ್ಗಾ ತುಮುರ್ ಓಚಿರ್ ಅವರಿಗೆ ಸೋತರು. ಓಚಿರ್ ಸೆಮಿಫೈನಲ್ ಹಣಾಹಣಿಯಲ್ಲಿ ತಜಕಿಸ್ತಾನದ ವಿಕ್ಟರ್ ರಸಾದಿನ್ ವಿರುದ್ಧ ಆಘಾತ ಅನುಭವಿಸಿದ್ದರಿಂದ ಭಾರತದ ಸ್ಪರ್ಧಿಗೆ ರೆಪೆಷಾಜ್ ಅವಕಾಶದ ಬಾಗಿಲು ಮುಚ್ಚಿತು.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ಅನುಪಸ್ಥಿತಿಯಲ್ಲಿ 57 ಕೆ.ಜಿ ವಿಭಾಗದಲ್ಲಿ ಭಾರತದ ಸವಾಲನ್ನು ಮುನ್ನಡೆಸಿದ್ದ ಚಿರಾಗ್ ಕೂಡಾ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ ಅಲ್ಮಾಜ್ ಸ್ಮಾನ್‌ಬೆಕೋವ್ (ಕಜಕಿಸ್ತಾನ) ವಿರುದ್ಧ ಸೋತರು.
ಚಂದ್ರಮೋಹನ್ 79 ಕೆ.ಜಿ ವಿಭಾಗದಲ್ಲಿ ತಜಕಿಸ್ತಾನದ ಮ್ಯಾಗೊಮೆಟ್ ಎವ್ಲೋವ್ ವಿರುದ್ಧ ಸೋಲು ಅನುಭವಿಸಿದರು.
ಭಾನುವಾರ ಸ್ಪರ್ಧೆಯ ಕೊನೆಯ ದಿನವಾಗಿದೆ. 2019ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ದೀಪಕ್ ಪೂನಿಯಾ 92 ಕೆ.ಜಿ ವಿಭಾಗದಲ್ಲಿ ಕಣದಲ್ಲಿದ್ದಾರೆ.
ಗ್ರೀಕೊ ರೋಮನ್ ವಿಭಾಗದಲ್ಲಿ ಎರಡು ಕಂಚು, ಮಹಿಳೆಯರ ವಿಭಾಗದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಸೇರಿದಂತೆ ಒಟ್ಟು ಆರು ಪದಕಗಳನ್ನು ಭಾರತ ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.