ADVERTISEMENT

ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕರೊಲಿನಾ ಕಣ್ಣು

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ

ಏಜೆನ್ಸೀಸ್
Published 30 ಜನವರಿ 2021, 13:17 IST
Last Updated 30 ಜನವರಿ 2021, 13:17 IST
ಕರೊಲಿನಾ ಮರಿನ್–ಎಎಫ್‌ಪಿ ಚಿತ್ರ
ಕರೊಲಿನಾ ಮರಿನ್–ಎಎಫ್‌ಪಿ ಚಿತ್ರ   

ಬ್ಯಾಂಕಾಕ್‌: ಅಮೋಘ ಲಯದಲ್ಲಿರುವ ಒಲಿಂಪಿಕ್ಸ್ ಚಾಂಪಿಯನ್ ಕರೊಲಿನಾ ಮರಿನ್‌ ಬಿಡಬ್ಲ್ಯುಎಫ್ ವಿಶ್ವ ಟೂರ್ ಬ್ಯಾಡ್ಮಿಂಟನ್ ಫೈನಲ್ಸ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದಲ್ಲಿ ಅವರು 21–13, 21–13ರಿಂದ ಥಾಯ್ಲೆಂಡ್‌ನ ಪಾರ್ನ್‌ಪವೀ ಚೋಚುವಾಂಗ್ ಅವರನ್ನು ಮಣಿಸಿದರು.

ಈ ಹಿಂದೆ ನಡೆದ ಎರಡೂ ಥಾಯ್ಲೆಂಡ್‌ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿರುವ ಸ್ಪೇನ್ ಆಟಗಾರ್ತಿ ಮರಿನ್, ಇಲ್ಲಿ ಗೆದ್ದರೆ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗುತ್ತದೆ.

ಭಾನುವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಅವರು ಅಗ್ರಶ್ರೇಯಾಂಕದ ಆಟಗಾರ್ತಿ ತೈವಾನ್‌ನ ತಾಯ್ ಜು ಯಿಂಗ್ ಅವರನ್ನು ಎದುರಿಸಲಿದ್ದಾರೆ.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಪಾರ್ನ್‌ಪವೀ ಈ ಟೂರ್ನಿಯಲ್ಲಿ ತಮ್ಮ ನಿರೀಕ್ಷೆಗಿಂತ ಉತ್ತಮ ಆಟವಾಡಿದರು. ಆದರೂ ಸೆಮಿಫೈನಲ್‌ನಲ್ಲಿ ಅವರಿಗೆ ಮರಿನ್ ಸವಾಲು ಮೀರಲಾಗಲಿಲ್ಲ.

ಮರಿನ್ ಅವರಿಗೆ ಫೈನಲ್‌ನಲ್ಲಿ ಎದುರಾಗಿರುವ ತಾಯ್ ಜು ಯಿಂಗ್ ನಾಲ್ಕರ ಘಟ್ಟದ ಪಂದ್ಯದಲ್ಲಿ 21–18, 21–12ರಿಂದ ದಕ್ಷಿಣ ಕೊರಿಯಾದ ಆ್ಯನ್ ಸೆ ಯೂಂಗ್ ಎದುರು ಗೆದ್ದು ಬೀಗಿದರು.

ಥಾಯ್ಲೆಂಡ್ ಓಪನ್ ಟೂರ್ನಿಯ ಫೈನಲ್‌ನಲ್ಲೂ ತಾಯ್ ಜು ಯಿಂಗ್‌– ಮರಿನ್ ಮುಖಾಮುಖಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.