ADVERTISEMENT

ಅಂಗಳಕ್ಕೆ ಮರಳಿದ ಅಮ್ಮಂದಿರು...

ಜಿ.ಶಿವಕುಮಾರ
Published 4 ನವೆಂಬರ್ 2018, 19:30 IST
Last Updated 4 ನವೆಂಬರ್ 2018, 19:30 IST
   

ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ, ಹೋದ ವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗು ಅಪ್ಪ ಶೋಯಬ್‌ ಮಲಿಕ್‌ ಅವರಂತೆ ಕ್ರಿಕೆಟಿಗನಾಗುತ್ತಾನೋ, ಇಲ್ಲ ಅಮ್ಮನಂತೆ ಟೆನಿಸ್‌ ಪಟುವಾಗಿ ಹೆಜ್ಜೆಗುರುತು ಮೂಡಿಸುತ್ತಾನೋ ಎಂಬ ಚರ್ಚೆ ಜೋರಾಗಿದೆ. ಸಾನಿಯಾ, ಮತ್ತೆ ಅಂಗಳಕ್ಕಿಳಿದು ಮೋಡಿ ಮಾಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿತ್ತು. ಅದಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಗುರಿ ಎಂದು ಹೇಳಿದ್ದಾರೆ. ಗರ್ಭಿಣಿಯಾಗಿದ್ದರಿಂದ ಆರು ತಿಂಗಳು ಆಟದಿಂದ ದೂರ ಉಳಿದಿದ್ದೆ. ಹೀಗಾಗಿ ದೇಹ ತೂಕ ಹೆಚ್ಚಿದೆ. ಅದು ಸಹಜ ಕೂಡಾ. ನನಗೀಗ 31 ವರ್ಷ ವಯಸ್ಸು. ಟೆನಿಸ್‌ ಆಡುವ ಸಾಮರ್ಥ್ಯ ಇನ್ನೂ ಇದೆ. ಫಿಟ್ನೆಸ್‌ ಕಾಪಾಡಿಕೊಂಡು ಮತ್ತೆ ಟ್ರೋಫಿಗಳನ್ನು ಜಯಿಸುತ್ತೇನೆ ಎಂದು ಸಾನಿಯಾ, ಹೇಳಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ತಾಯ್ತನದ ನಂತರ ಅನೇಕರು ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದಾರೆ. ಕೆಲವರು ಮತ್ತೆ ಮೈದಾನಕ್ಕಿಳಿದು ಮಿಂಚಿದ್ದಾರೆ. ಪದಕ ಮತ್ತು ಪ್ರಶಸ್ತಿಗಳನ್ನು ಜಯಿಸಿ ದಾಖಲೆ ನಿರ್ಮಿಸಿದ್ದಾರೆ. ಅಂತಹ ಸಾಧಕಿಯರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

**

1) ಸೆರೆನಾ ವಿಲಿಯಮ್ಸ್‌

ADVERTISEMENT

ಗ್ರ್ಯಾನ್‌ಸ್ಲಾಮ್‌ನಲ್ಲಿ 23 ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಅಮೆರಿಕದ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ಅವರದ್ದು. ಎಂಟು ವಾರಗಳ ಗರ್ಭಿಣಿಯಾಗಿದ್ದಾಗ ಆಸ್ಟ್ರೇಲಿಯಾ ಓಪನ್‌ನಲ್ಲಿ (2017ರ ಜನವರಿ) ಚಾಂಪಿಯನ್‌ ಆಗಿದ್ದ ಸೆರೆನಾ, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕ ಕೆಲ ಸಮಯ ಅಂಗಳದಿಂದ ದೂರ ಉಳಿದಿದ್ದ ಅವರು ಈಗ ಮತ್ತೆ ಮೈದಾನದಲ್ಲಿ ಸದ್ದು ಮಾಡುತ್ತಿದ್ದಾರೆ.

ಈ ವರ್ಷ ನಡೆದಿದ್ದ ಫ್ರೆಂಚ್‌ ಓಪನ್‌ನಲ್ಲಿ ಆಡಿದ್ದ ಸೆರೆನಾ, ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು. ಅಮೆರಿಕ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿ ಗಮನ ಸೆಳೆದಿದ್ದರು.

************

2) ಫ್ಯಾನಿ ಬ್ಲಾಂಕರ್ಸ್‌ ಕೊಯೆನ್‌

ಎರಡು ಮಕ್ಕಳ ತಾಯಿಯಾದ ನಂತರ ಟ್ರ್ಯಾಕ್‌ಗೆ ಇಳಿದಿದ್ದ ನೆದರ್ಲೆಂಡ್ಸ್‌ನ ಅಥ್ಲೀಟ್‌ ಫ್ಯಾನಿ, 1948ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಹೊಸ ಭಾಷ್ಯ ಬರೆದಿದ್ದರು. 100 ಮತ್ತು 200 ಮೀಟರ್ಸ್‌ ಓಟ, 80 ಮೀಟರ್ಸ್‌ ಹರ್ಡಲ್ಸ್‌ ಹಾಗೂ 4X100 ಮೀಟರ್ಸ್‌ ರಿಲೇ ಸ್ಪರ್ಧೆಗಳಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಆಗ ಫ್ಯಾನಿ ಅವರ ವಯಸ್ಸು 30 ವರ್ಷ. ನಂತರವೂ ಅಥ್ಲೆಟಿಕ್ಸ್‌ನಲ್ಲಿ ಹೆಜ್ಜೆಗುರುತು ಮೂಡಿಸಿದ್ದ ಫ್ಯಾನಿಗೆ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ ನೀಡುವ ‘ಶತಮಾನದ ಶ್ರೇಷ್ಠ ಮಹಿಳಾ ಅಥ್ಲೀಟ್‌’ ಗೌರವ (1999ರಲ್ಲಿ) ಒಲಿದಿತ್ತು.

* ಜೆಸ್ಸಿಕಾ ಎನ್ನಿಸ್‌ ಹಿಲ್ಸ್‌

2012ರ ಒಲಿಂಪಿಕ್ಸ್‌ನ ಹೆಪ್ಟಾಥ್ಲಾನ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದ ಇಂಗ್ಲೆಂಡ್‌ನ ಜೆಸ್ಸಿಕಾ, 2014ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಆ ವರ್ಷ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದರು. ಬಳಿಕ ಮತ್ತೆ ಟ್ರ್ಯಾಕ್‌ಗೆ ಹಿಂತಿರುಗಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಜರುಗಿದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದು ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದರು.

* ಕಿಮ್‌ ಕ್ಲಿಜ್‌ಸ್ಟರ್ಸ್‌

2009ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬೆಲ್ಜಿಯಂನ ಟೆನಿಸ್‌ ಆಟಗಾರ್ತಿ ಕಿಮ್‌, ಮತ್ತೆ ರ‍್ಯಾಕೆಟ್‌ ಹಿಡಿದು ಮೋಡಿ ಮಾಡಿದ್ದರು. 2009 ಮತ್ತು 2010ರಲ್ಲಿ ನಡೆದಿದ್ದ ಅಮೆರಿಕ ಓಪನ್‌ ಟೂರ್ನಿಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಅವರದ್ದು. 2011ರ ಆಸ್ಟ್ರೇಲಿಯಾ ಓಪನ್‌ನಲ್ಲೂ ಚಾಂಪಿಯನ್‌ ಆಗಿದ್ದರು.

* ಮೇರಿ ಕೋಮ್‌

ಭಾರತದ ಮೇರಿ ಕೋಮ್‌ ಕೂಡ ತಾಯಿಯಾದ ನಂತರ ಅಪಾರ ಯಶಸ್ಸು ಗಳಿಸಿದ್ದರು. 2007ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ಮೇರಿ ಅವರ ಕ್ರೀಡಾ ಬದುಕು ಮುಗಿದೇ ಹೋಯಿತು ಎಂದು ಹಲವರು ಹೇಳಿದ್ದರು. ಆದರೆ ‘ಮ್ಯಾಗ್ನಿಫಿಷಿಯೆಂಟ್‌ ಮೇರಿ’ ಕೈ ಕಟ್ಟಿ ಕೂರಲಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಜಯಿಸಿದ್ದ ಅವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು. 2014ರ ಇಂಚೆನ್‌ ಏಷ್ಯನ್‌ ಕ್ರೀಡಾಕೂಟ, 2017ರ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಮತ್ತು ಈ ವರ್ಷ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲೂ ಮಣಿಪುರದ ಮೇರಿ ಚಿನ್ನದ ಪದಕಗಳನ್ನು ಗೆದ್ದಿದ್ದರು.

* ಮಾರ್ಗರೇಟ್‌ ಕೋರ್ಟ್‌

ಟೆನಿಸ್‌ ಲೋಕದ ದಂತಕತೆ ಮಾರ್ಗರೇಟ್‌ ಕೂಡಾ ಅಮ್ಮನಾದ ಬಳಿಕ ಅಂಗಳದಲ್ಲಿ ಅಬ್ಬರಿಸಿದ್ದರು. 1972ರಲ್ಲಿ ಗಂಡು ಮಗುವಿನ ತಾಯಿಯಾಗಿದ್ದ ಅವರು ನಂತರ ಮೂರು ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ಚಾಂಪಿಯನ್‌ ಆಗಿದ್ದರು. 1973ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ, ಫ್ರೆಂಚ್‌ ಮತ್ತು ಅಮೆರಿಕ ಓಪನ್‌ಗಳಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಅಮ್ಮನಾದ ನಂತರ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಹಿರಿಮೆಯೂ ಅವರದ್ದಾಗಿದೆ.

* ಕ್ರಿಸ್ಟಿನ್‌ ಆರ್ಮ್‌ಸ್ಟ್ರಾಂಗ್‌

ಅಮೆರಿಕದ ಸೈಕ್ಲಿಸ್ಟ್‌ ಆರ್ಮ್‌ಸ್ಟ್ರಾಂಗ್‌, 2008ರ ಬೀಜಿಂಗ್‌ ಒಲಿಂಪಿಕ್ಸ್‌ನ ಟೈಮ್‌ ಟ್ರಯಲ್‌ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ತಾಯಿಯಾದ ನಂತರವೂ ಅವರ ಪದಕಗಳ ಬೇಟೆ ಮುಂದುವರಿದಿತ್ತು. 2012ರ ಲಂಡನ್‌ ಮತ್ತು 2016ರ ರಿಯೊ ಒಲಿಂಪಿಕ್ಸ್‌ಗಳಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದರು. ರಿಯೊ ಕೂಟದಲ್ಲಿ ಜಯಿಸಿದ ಪದಕವನ್ನು ಮಗನ ಕೈಗಿಟ್ಟು ಖುಷಿಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.