ADVERTISEMENT

ಫೈನಲ್‌ಗೆ ರಾಜ್ಯದ ಟೆನಿಸ್ ತಂಡಗಳು

ರಾಷ್ಟ್ರೀಯ ಕ್ರೀಡಾಕೂಟ: ಸಿಂಗಲ್ಸ್ ವಿಭಾಗದ ಸೆಮಿಗೆ ಪ್ರಜ್ವಲ್, ಮನೀಷ್, ಶರ್ಮದಾ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 14:11 IST
Last Updated 3 ಅಕ್ಟೋಬರ್ 2022, 14:11 IST
ಕಿರಣ್ ಕುಮಾರ್
ಕಿರಣ್ ಕುಮಾರ್   

ಬೆಂಗಳೂರು: ಅಮೋಘ ಆಟ ಮುಂದುವರಿಸಿದ ಕರ್ನಾಟಕದ ಪುರುಷ ಮತ್ತು ಮಹಿಳಾ ಟೆನಿಸ್‌ ಡಬಲ್ಸ್ ವಿಭಾಗದ ತಂಡಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಫೈನಲ್‌ಗೆ ಲಗ್ಗೆಯಿಟ್ಟವು.

ಗುಜರಾತ್‌ನ ಅಹಮದಾಬಾದ್‌ನ ಸಾಬರಮತಿ ರಿವರ್‌ಫ್ರಂಟ್‌ ಅಂಗಣದಲ್ಲಿ ಟೆನಿಸ್‌ಸ್ಪರ್ಧೆಗಳ ನಡೆಯುತ್ತಿವೆ. ಸೋಮವಾರ ನಡೆದ ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಕರ್ನಾಟಕದ ಆದಿಲ್ ಕಲ್ಯಾಣಪುರ ಮತ್ತು ಎಸ್‌.ಡಿ. ಪ್ರಜ್ವಲ್ ದೇವ್‌5-7,6-3,10-6ರಿಂದ ಆಂಧ್ರಪ್ರದೇಶದ ಶಿವದೀಪ ಕೋಸರಾಜು ಮತ್ತು ಅನಂತ್ ಮಣಿ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದರು.

ಮಹಿಳಾ ಡಬಲ್ಸ್‌ನಲ್ಲಿ ಸೋಹಾ ಸಾದಿಕ್ ಮತ್ತು ಶರ್ಮದಾ ಬಾಲು ಜೋಡಿಯು6-2, 6-1ರಿಂದ ಹರಿಯಾಣದ ಸಂದೀಪ್ತಿ ಸಿಂಗ್‌ ಮತ್ತು ರಿತು ಒಹಲ್ಯಾನ್ ಅವರನ್ನು ಪರಾಭವಗೊಳಿಸಿದರು.

ADVERTISEMENT

ಪ್ರಜ್ವಲ್‌, ಮನೀಷ್ ಜಿ. ಮತ್ತು ಶರ್ಮದಾ ಬಾಲು ಸಿಂಗಲ್ಸ್ ವಿಭಾಗಗಳಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದರು. ಪುರುಷರ ವಿಭಾಗದಲ್ಲಿ ಪ್ರಜ್ವಲ್‌6-4, 6-2ರಿಂದ ತಮಿಳುನಾಡಿನ ಅಭಿನವ್ ಸಂಜೀವ್ ಎದುರು, ಮನೀಷ್‌3-6, 7-5, 6-2ರಿಂದ ಹರಿಯಾಣದ ಕರಣ್ ಸಿಂಗ್ ವಿರುದ್ಧ ಗೆದ್ದರು. ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಶರ್ಮದಾ1-6, 6-3, 6-1ರಿಂದ ತೆಲಂಗಾಣದ ಪಾವನಿ ಪಾಠಕ್ ಸವಾಲು ಮೀರಿದರು.

ಕರ್ನಾಟಕ ಫುಟ್‌ಬಾಲ್ ತಂಡಕ್ಕೆ ಜಯ: ಶ್ರೀಧರ್ ಕೋಟಿಕೇಲ (4ನೇ ನಿಮಿಷ) ಮತ್ತು ಸತೀಶ್ ಕುಮಾರ್ (10ನೇ ನಿ.) ಅವರ ಕಾಲ್ಚಳಕದ ಬಲದಿಂದ ಕರ್ನಾಟಕ ಪುರುಷರ ಫುಟ್‌ಬಾಲ್ ತಂಡವು 2–1ರಿಂದ ಆತಿಥೇಯ ಗುಜರಾತ್ ತಂಡಕ್ಕೆ ಸೋಲುಣಿಸಿತು.

ಗುಜರಾತ್ ತಂಡಕ್ಕಾಗಿ ಪರ್ಮಾರ್ ಧರ್ಮೇಶ್ 52ನೇ ನಿಮಿಷದಲ್ಲಿ ಒಂದು ಗೋಲು ಹೊಡೆದರು.

ಸ್ಕೇಟಿಂಗ್‌ನಲ್ಲಿ ಚಿನ್ನ: ಕರ್ನಾಟಕದ ಮಹಿನ್ ಟಂಡನ್ ಅವರು ರಾಷ್ಟ್ರೀಯ ಕ್ರೀಡಾಕೂಟದಪುರುಷರ ಆರ್ಟಿಸ್ಟಿಕ್ ಸ್ಕೇಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಇದೇ ವಿಭಾಗದಲ್ಲಿ ಕಿರಣ್ ಕುಮಾರ್ ಮತ್ತು ಮಹಿಳೆಯರ ವಿಭಾಗದಲ್ಲಿ ಸುವರ್ಣಿಕಾ ಕಂಚಿನ ಪದಕಗಳಿಗೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.