ದೋಹಾ: ಜಾವೆಲಿನ್ ಥ್ರೋ ತಾರೆ, ಒಲಿಂಪಿಯನ್ ನೀರಜ್ ಚೋಪ್ರಾ ಸೇರಿದಂತೆ ಭಾರತದ ನಾಲ್ವರು ಅಥ್ಲೀಟ್‌ಗಳು ಇದೇ 16ರಂದು ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್ ಅಥ್ಲೆಟಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಚೋಪ್ರಾ 2023 ರಲ್ಲಿ (88.67.ಮೀ) ಪ್ರಶಸ್ತಿ ಗೆದ್ದಿದ್ದರು. 2024ರಲ್ಲಿ ಎರಡನೇ ಸ್ಥಾನ (88.36ಮೀ) ಪಡೆದಿದ್ದರು. ಹರಿಯಾಣದ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಅವರೊಂದಿಗೆ ಕಿಶೋರ್ ಕುಮಾರ್ ಜೇನಾ ಕೂಡ ಇಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಜೇನಾ ಅವರು ಹೋದ ವರ್ಷ 9ನೇ ಸ್ಥಾನ ಪಡೆದಿದ್ದರು.
ಖ್ಯಾತನಾಮ ಅಥ್ಲೀಟ್‌ಗಳಿರುವ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ತುರುಸಿನ ಪೈಪೋಟಿ ಇದೆ. ಎರಡು ಬಾರಿ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ ಕೂಟದ ಕಂಚಿನ ಪದಕ ವಿಜೇತ, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್, ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಚ್, ಜರ್ಮನಿಯ ಜೂಲಿಯನ್ ವೆಬರ್ ಮತ್ತು ಮ್ಯಾಕ್ ದೆಹನಿಂಗ್, ಜಪಾನ್ ದೇಶದ ರಾಡೆರಿಕ್ ಗೆಂಕಿ ಡೀನ್ ಮತ್ತು ಕೆನ್ಯಾದ ಜೂಲಿಯಸ್ ಯೆಗೊ ಪೈಪೊಟಿಯಲ್ಲಿದ್ದಾರೆ.
ಈ ಲೀಗ್‌ನಲ್ಲಿ ಭಾರತದ ಗುಲ್ವೀರ್ ಸಿಂಗ್ ಅವರು ಪುರುಷರ 5000 ಮೀ ಓಟ ಮತ್ತು ಪಾರುಲ್ ಚೌಧರಿ ಅವರು ಮಹಿಳೆಯರ 3000 ಮೀ ಸ್ಟೀಪಲ್ ಚೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇವರಿಬ್ಬರೂ ತಮ್ಮ ವಿಭಾಗಗಳಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.