ADVERTISEMENT

ಚಳಿಗಾಲದ ಒಲಿಂಪಿಕ್ಸ್‌: ನ್ಯೂಜಿಲೆಂಡ್‌ಗೆ ಐತಿಹಾಸಿಕ ಚಿನ್ನ

ಏಜೆನ್ಸೀಸ್
Published 7 ಫೆಬ್ರುವರಿ 2022, 4:33 IST
Last Updated 7 ಫೆಬ್ರುವರಿ 2022, 4:33 IST
ಚಿನ್ನ ಗೆದ್ದ ಜೊಯಿ ಸ್ಯಾಡೊವ್‌ಸ್ಕಿ ಸೈನಟ್ ಅವರ ಸಂಭ್ರಮ –ಎಎಫ್‌ಪಿ ಚಿತ್ರ
ಚಿನ್ನ ಗೆದ್ದ ಜೊಯಿ ಸ್ಯಾಡೊವ್‌ಸ್ಕಿ ಸೈನಟ್ ಅವರ ಸಂಭ್ರಮ –ಎಎಫ್‌ಪಿ ಚಿತ್ರ   

ಬೀಜಿಂಗ್‌: ಅಮೋಘ ಸಾಮರ್ಥ್ಯ ತೋರಿದ ಸ್ನೋಬೋರ್ಡ್ ಪಟು ಜೊಯಿ ಸ್ಯಾಡೊವ್‌ಸ್ಕಿ ಸೈನಟ್ ಅವರು ನ್ಯೂಜಿಲೆಂಡ್‌ಗೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟರು.

ಕೂಟದ ಎರಡನೇ ದಿನವಾದ ಭಾನುವಾರ ನಡೆದ ಮಹಿಳೆಯರ ಸ್ಲೋಪಿ ಸ್ಟೈಲ್‌ ವಿಭಾಗದಲ್ಲಿ 20 ವರ್ಷದ ಸ್ಯಾಡೊವ್‌ಸ್ಕಿ ಅಮೆರಿಕದ ಜೂಲಿಯಾ ಮರಿನೊ ಮತ್ತು ಆಸ್ಟ್ರೇಲಿಯಾದ ಟೆಸ್ ಕಾಡಿ ಅವರನ್ನು ಹಿಂದಿಕ್ಕಿ 92.88 ಸ್ಕೋರು ಗಳಿಸಿದರು. ಇದು, ಕೂಟದಲ್ಲಿ ನ್ಯೂಜಿಲೆಂಡ್ ಗೆದ್ದ ಮೊತ್ತಮೊದಲ ಚಿನ್ನದ ಪದಕವಾಗಿದೆ.

2018ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ನ್ಯೂಜಿಲೆಂಡ್ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದುಕೊಂಡಿತ್ತು. ಆಗ ಸ್ಯಾಡೊವ್‌ಸ್ಕಿ ಬಿಗ್ ಏರ್‌ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

ADVERTISEMENT

ರಷ್ಯಾದ ಅಲೆಕ್ಸಾಂಡರ್ ಬೊಲ್ಶುನೊವ್ ಅವರು ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನಲ್ಲಿ ಚಿನ್ನ ಗೆದ್ದರು. ಆದರೆ ಈ ಪದಕ ರಷ್ಯಾದ ಖಾತೆಗೆ ಸೇರಲಿಲ್ಲ. ಸಾಮೂಹಿಕವಾಗಿ ಉದ್ದೀಪನ ಮದ್ದು ಸೇವಿಸಿದ್ದರಿಂದಾಗಿ ರಷ್ಯಾವನ್ನು 2014ರ ಸೋಚಿ ಒಲಿಂಪಿಕ್ಸ್‌ನಿಂದ ನಿಷೇಧಿಸಲಾಗಿದೆ. ಈ ಬಾರಿಯೂ ಅಲ್ಲಿನ ಕ್ರೀಡಾಪಟುಗಳು ರಷ್ಯಾ ಒಲಿಂಪಿಕ್ ಸಮಿತಿಯ ಧ್ವಜದಡಿ ಸ್ಪರ್ಧಿಸುತ್ತಿದ್ದಾರೆ.

ಪುರುಷರ ಲ್ಯೂಜ್ ಸ್ಪರ್ಧೆಯಲ್ಲಿ ಜರ್ಮನಿಯ ಜೊಹಾನ್ಸ್‌ ಲುಡ್ವಿಂಗ್ ತಾಸಿಗೆ 133 ಕಿಮೀ ವೇಗದಲ್ಲಿ ಸಾಗಿ ಚಿನ್ನದ ಪದಕ ಗಳಿಸಿದರು. ಜಪಾನ್‌ನ ರ‍್ಯೋಯು ಕೊಬಾಯಶಿ ಅವರು ಸ್ಕೀ ಜಂಪಿಂಗ್‌ನಲ್ಲಿ ಚಿನ್ನ ಗಳಿಸಿದರು. ಈ ವಿಭಾಗದಲ್ಲಿ ಜಪಾನ್‌ಗೆ ಇದು ಮೊದಲ ಚಿನ್ನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.