ADVERTISEMENT

ನಿಖತ್‌, ಲವ್ಲಿನಾಗೆ ಕಾಮನ್‌ವೆಲ್ತ್ ಟಿಕೆಟ್‌

ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಕ್ರೀಡಾಕೂಟ: ನೀತು, ಜಾಸ್ಮಿನ್ ಆಯ್ಕೆ

ಪಿಟಿಐ
Published 11 ಜೂನ್ 2022, 13:43 IST
Last Updated 11 ಜೂನ್ 2022, 13:43 IST
ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ (ಎಡದಿಂದ)ನಿಖತ್ ಜರೀನ್, ಲವ್ಲಿನಾ ಬೊರ್ಗೋಹೈನ್‌, ನೀತು ಮತ್ತು ಜಾಸ್ಮಿನ್ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು– ಪಿಟಿಐ ಚಿತ್ರ
ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ (ಎಡದಿಂದ)ನಿಖತ್ ಜರೀನ್, ಲವ್ಲಿನಾ ಬೊರ್ಗೋಹೈನ್‌, ನೀತು ಮತ್ತು ಜಾಸ್ಮಿನ್ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು– ಪಿಟಿಐ ಚಿತ್ರ   

ನವದೆಹಲಿ: ಹಾಲಿ ವಿಶ್ವ ಚಾಂಪಿಯನ್‌ ನಿಖತ್ ಜರೀನ್‌ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೋಹೈನ್ ಅವರು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಬಾಕ್ಸಿಂಗ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಇಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನ 50 ಕೆಜಿ ವಿಭಾಗದಲ್ಲಿ ನಿಖತ್‌ 7–0ಯಿಂದ ಮೀನಾಕ್ಷಿ ಅವರನ್ನು ಪರಾಭವಗೊಳಿಸಿದರು. 70 ಕೆಜಿ ವಿಭಾಗದ ಬೌಟ್‌ನಲ್ಲಿ ಲವ್ಲಿನಾ ಕೂಡ ಇಷ್ಟೇ ಅಂತರದಿಂದ ಪೂಜಾ ಸವಾಲು ಮೀರಿದರು.

ಕಳೆದ ತಿಂಗಳು 52 ಕೆಜಿ ವಿಭಾಗದಲ್ಲಿ ನಿಖತ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ADVERTISEMENT

ನೀತು ಗಂಗಾಸ್‌ (48 ಕೆಜಿ) ಮತ್ತು ಜಾಸ್ಮಿನ್‌ ಲಂಬೊರಿಯಾ (60 ಕೆಜಿ) ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾದ ಇನ್ನಿಬ್ಬರು ಬಾಕ್ಸರ್‌ಗಳು.

ಮಾಜಿ ಯೂತ್ ಚಾಂಪಿಯನ್ ಆಗಿರುವ ನೀತು 5–2ರಿಂದ ಮಂಜು ರಾಣಿ ಅವರನ್ನು ಮಣಿಸಿದರು. ಹೋದ ವರ್ಷ ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದ ಜಾಸ್ಮಿನ್‌ ಅವರು ಪರ್ವೀನ್ ಹೂಡಾ ಅವರಿಗೆ ಸೋಲುಣಿಸಿದರು.

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆಗಸ್ಟ್‌ 8ರವರೆಗೆ ಕೂಟ ನಡೆಯಲಿದೆ.

2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡವು ತಲಾ ಮೂರು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

ಈ ಬಾರಿಯ ಕೂಟಕ್ಕೆ ಪುರುಷರ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.