ಪಟ್ನಾ: ಕರ್ನಾಟಕದ ಚಿರಂತ್ ಪಿ. ಅವರು ಇಲ್ಲಿ ಸೋಮವಾರ ಆರಂಭಗೊಂಡ ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಬಾಲಕರ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದರು.
ಚಿರಂತ್ ಅವರು 10.89 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ತಮಿಳುನಾಡಿನ ಫ್ರೆಡ್ರಿಕ್ ರಸ್ಸೆಲ್ (11.04ಸೆ) ಮತ್ತು ಬಿಹಾರದ ದಿವ್ಯಾಂಶ್ ಕುಮಾರ್ ರಾಜ್ (11.08ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಬಾಲಕರ 400 ಮೀಟರ್ ಓಟದಲ್ಲಿ ಕರ್ನಾಟಕದ ಸಯ್ಯದ್ ಸಬೀರ್ (48.06ಸೆ) ಬೆಳ್ಳಿದ ಸಾಧನೆ ಮಾಡಿದರು. ಜಾರ್ಖಂಡ್‌ನ ಸಾಕೇತ್ ಮಿಂಜ್ (47.63ಸೆ) ಮತ್ತು ಉತ್ತರ ಪ್ರದೇಶದ ಕದಿರ್ ಖಾನ್ (48.54ಸೆ) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ನಿತಿನ್ ದಾಖಲೆ: ಉತ್ತರಪ್ರದೇಶದ ನಿತಿನ್ ಗುಪ್ತಾ ಅವರು ಬಾಲಕರ 5 ಸಾವಿರ ಮೀಟರ್ ನಡಿಗೆಯಲ್ಲಿ ರಾಷ್ಟ್ರೀಯ ಯೂತ್ ದಾಖಲೆಯೊಂದಿಗೆ ಚಿನ್ನ ಗೆದ್ದರು.
17 ವರ್ಷ ವಯಸ್ಸಿನ ನಿತಿನ್ 19 ನಿಮಿಷ 24.48 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕಳೆದ ವರ್ಷ ಭುವನೇಶ್ವರದಲ್ಲಿ ನಿರ್ಮಿಸಿದ್ದ ತಾವೇ ನಿರ್ಮಿಸಿದ್ದ ದಾಖಲೆಯನ್ನು ಸುಧಾರಿಸಿಕೊಂಡರು. ಉತ್ತರಾಖಂಡದ ತುಷಾರ್ ಪನ್ವಾರ್ ಮತ್ತು ಪ್ರಶಾಂತ್ ಕುಮಾರ್ ಕ್ರಮವಾಗಿ ನಂತರದ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.