ADVERTISEMENT

ಜಾಗೃತಿಗಾಗಿ 10.55 ಕಿ.ಮೀ. ದೂರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್!

ಹುಬ್ಬಳ್ಳಿಯ ಓಜಲ್‌ ನಲವಡಿ ಸಾಧನೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 17:50 IST
Last Updated 19 ಮೇ 2019, 17:50 IST
ಹುಬ್ಬಳ್ಳಿಯಲ್ಲಿ ಭಾನುವಾರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಪ್ರದರ್ಶಿಸಿದ ಓಜಲ್‌ ನಲವಾಡೆ
ಹುಬ್ಬಳ್ಳಿಯಲ್ಲಿ ಭಾನುವಾರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಪ್ರದರ್ಶಿಸಿದ ಓಜಲ್‌ ನಲವಾಡೆ   

ಹುಬ್ಬಳ್ಳಿ: ಜನಜಂಗುಳಿಯಿಂದ ನಿತ್ಯ ಗಿಜಿಗುಡುತ್ತಿದ್ದ ಕುಸುಗಲ್ ರಸ್ತೆಯಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ವಾಹನಗಳ ಅಬ್ಬರ ಇರಲಿಲ್ಲ. ನಿಧಾನವಾಗಿ ಒಂದೊಂದೇ ವಾಹನ ರಸ್ತೆಬದಿಯಲ್ಲಿ ಹೋಗುತ್ತಿದ್ದರೆ, ಯುವ ಪ್ರತಿಭೆ ಓಜಲ್‌ ಎಸ್‌. ನಲವಡಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ಸಾಹಸ ಪ್ರದರ್ಶಿಸಿದರು.

ಈಗಿನ ಮಕ್ಕಳಲ್ಲಿ ಟಿ.ವಿ. ನೋಡುವುದು, ಮೊಬೈಲ್‌ನಲ್ಲಿ ಕಾಲ ಕಳೆಯುವುದು ಹೆಚ್ಚಾಗಿದೆ. ಇದರಿಂದ ಕ್ರೀಡೆ ಹಾಗೂ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಆದ್ದರಿಂದ ಯುವಜನತೆಯಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಓಜಲ್‌ ಸ್ಕೇಟಿಂಗ್ ಸಾಹಸ ಹಮ್ಮಿಕೊಂಡಿದ್ದರು.

ಹುಬ್ಬಳ್ಳಿ ರೋಲರ್‌ ಸ್ಕೇಟಿಂಗ್ ಕ್ಲಬ್‌ (ಎಚ್‌ಆರ್‌ಎಸ್‌ಸಿ) ಸಂಘಟಿಸಿದ್ದ ಜಾಗೃತಿ ಕಾರ್ಯಕ್ರಮ ಕುಸುಗಲ್ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆಯಿಂದ ಆರಂಭವಾಯಿತು. ಒಟ್ಟು 10.55 ಕಿ.ಮೀ. ದೂರವನ್ನು 25 ನಿಮಿಷ 54 ಸೆಕೆಂಡುಗಳಲ್ಲಿ ಮುಟ್ಟಿದರು.

ADVERTISEMENT

12 ವರ್ಷದ ಓಜಲ್‌ಎಚ್‌ಆರ್‌ಎಸ್‌ ಕ್ಲಬ್‌ನಲ್ಲಿ ಅಕ್ಷಯ ಸೂರ್ಯವಂಶಿ ಬಳಿ ತರಬೇತಿ ಪಡೆಯುತ್ತಿದ್ದಾರೆ. ಜೆಎಸ್‌ಎಸ್‌ ಸಂಸ್ಥೆಯ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾರೆ. ಓಜಲ್‌ ಹುಬ್ಬಳ್ಳಿಯ ಸುನಿಲ್ ನಲವಾಡೆ ಹಾಗೂ ದೀಪಾ ದಂಪತಿಯ ಪುತ್ರಿ.

ಗುರಿ ಮುಟ್ಟುವ ಹಾದಿಯಲ್ಲಿ ಅಲ್ಲಲ್ಲಿ ಬರುತ್ತಿದ್ದ ವಾಹನಗಳ ಶಬ್ಧ ಆಲಿಸಿ ಸುರಕ್ಷತಾ ವಲಯದಲ್ಲಿ ಸ್ಕೇಟಿಂಗ್ ಮುಂದುವರಿಸುತ್ತಿದ್ದವು. ಇದಕ್ಕೆ ಕುಟುಂಬದವರು ಹಾಗೂ ಕ್ಲಬ್‌ ಸದಸ್ಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು. ಕೆಪಿಟಿಸಿಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ.ಸಿ. ನಿರ್ಮಲಾ, ಶಿಗ್ಗಾವಿ ಏತ ನೀರಾವರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಶ್ರೀಧರ ಕುಲಕರ್ಣಿ ಈ ಸಾಹಸಕ್ಕೆ ಸಾಕ್ಷಿಯಾದರು.

ಓಜಲ್‌ ಹಿಂದೆ ತಂಡ ವಿಭಾಗದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾಹಸ ಮೆರೆದಿದ್ದರು. ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನವನ್ನು ಸ್ಕೇಟಿಂಗ್‌ ಮೂಲಕ ಮಾಡಿದ್ದರು.

‘10.55 ಕಿ.ಮೀ. ದೂರವನ್ನು ಕಣ್ಣು ಮುಚ್ಚಿಕೊಂಡು ಕಡಿಮೆ ಸಮಯದಲ್ಲಿ ತಲುಪಿದ್ದು ಹೆಮ್ಮೆಯ ವಿಷಯ. ಇದನ್ನು ದಾಖಲೆಗಾಗಿ ಕಳುಹಿಸಲಾಗುವುದು’ ಎಂದು ಓಜಲ್‌ ತಂದೆ ಸುನಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅತಿಯಾದ ಮೊಬೈಲ್‌ ಬಳಕೆಯಿಂದ ಈಗಿನ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಟಿ.ವಿ. ನೋಡಿ ಸಮಯ ಕಳೆಯುತ್ತಿದ್ದಾರೆ. ದೈಹಿಕ ಚಟುವಟಿಕೆಯೇ ಇಲ್ಲದಂತಾಗಿದೆ. ಆದ್ದರಿಂದ ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗಿದೆ. ದೈಹಿಕ ಕಸರತ್ತಿನಿಂದ ಮಕ್ಕಳ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ಮಕ್ಕಳ ಆಸೆಗೆ ಎಲ್ಲ ಪೋಷಕರು ಬೆಂಬಲ ನೀಡಬೇಕು’ ಎಂದು ಸುನಿಲ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.