ADVERTISEMENT

ಬಿಡಬ್ಲ್ಯುಎಫ್‌ ವಿಶ್ವ ರ‍್ಯಾಂಕಿಂಗ್‌: ಏಳನೇ ಸ್ಥಾನದಲ್ಲಿ ಮುಂದುವರಿದ ಸಿಂಧು

ಪಿಟಿಐ
Published 29 ಮಾರ್ಚ್ 2022, 13:00 IST
Last Updated 29 ಮಾರ್ಚ್ 2022, 13:00 IST
ಎಚ್‌.ಎಸ್‌.ಪ್ರಣಯ್‌– ಎಎಫ್‌ಪಿ ಚಿತ್ರ
ಎಚ್‌.ಎಸ್‌.ಪ್ರಣಯ್‌– ಎಎಫ್‌ಪಿ ಚಿತ್ರ   

ನವದೆಹಲಿ: ಸ್ವಿಸ್‌ ಓಪನ್ ಟೂರ್ನಿಯಲ್ಲಿರನ್ನರ್ ಅಪ್ ಆಗಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್‌.ಎಸ್. ಪ್ರಣಯ್ ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರು ಸ್ಥಾನಗಳ ಬಡ್ತಿ ಪಡೆದು 23ನೇ ಸ್ಥಾನಕ್ಕೆ ತಲುಪಿದ್ದಾರೆ.

ಐದು ವರ್ಷಗಳ ಬಳಿಕ ಪ್ರಮುಖ ಟೂರ್ನಿಯೊಂದರ ಫೈನಲ್ ತಲುಪಿದ್ದ ಪ್ರಣಯ್ ಅವರು ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಎದುರು ಎಡವಿದ್ದರು. ಸದ್ಯ ಅವರ ಬಳಿ52,875 ರ‍್ಯಾಂಕಿಂಗ್ ಪಾಯಿಂಟ್‌ಗಳಿವೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಕಳೆದ ಮೂರು ವರ್ಷಗಳಿಂದ ಹೆಚ್ಚಿನ ಸಾಮರ್ಥ್ಯ ತೋರಲು ಸಾಧ್ಯವಾಗಿರಲಿಲ್ಲ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಸ್ವಿಸ್‌ ಓಪನ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅವರು ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ADVERTISEMENT

ಇನ್ನುಳಿದ ಭಾರತೀಯರ ಪೈಕಿ ಲಕ್ಷ್ಯ ಸೇನ್‌ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಈ ತಿಂಗಳ ಆರಂಭದಲ್ಲಿ ನಡೆದ ಜರ್ಮನ್‌ ಓಪನ್‌ ಮತ್ತು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ಪ್ರಶಸ್ತಿ ಸುತ್ತಿಗೆ ತಲುಪಿದ್ದರು. ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿಯು ಏಳನೇ ಸ್ಥಾನದಲ್ಲಿದೆ.

ಕಿದಂಬಿ ಶ್ರೀಕಾಂತ್‌ 12ನೇ ಮತ್ತು ಬಿ. ಸಾಯಿ ಪ್ರಣೀತ್‌ 19ನೇ ಸ್ಥಾನದಲ್ಲಿದ್ದಾರೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಮಹಿಳೆಯರ ವಿಭಾಗದಲ್ಲಿ 23ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ಸಿಕ್ಕಿ ರೆಡ್ಡಿ 20ನೇ ಮತ್ತು ತ್ರೀಶಾ ಜೋಲಿ– ಗಾಯತ್ರಿ ಗೋಪಿಚಂದ್‌ 15ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.