ADVERTISEMENT

ಪ್ರೊ ಕಬಡ್ಡಿ: ಪ್ರದೀಪ್ ನರ್ವಾಲ್, ಸುರೇಂದರ್ ಗಿಲ್ ಅಮೋಘ ಆಟ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 4:28 IST
Last Updated 10 ಫೆಬ್ರುವರಿ 2022, 4:28 IST
ಗುಜರಾತ್ ಜೈಂಟ್ಸ್ ರೇಡರ್ ರಾಕೇಶ್ ಪಾಯಿಂಟ್ಸ್ ಗಳಿಸಲು ಪ್ರಯತ್ನಿಸಿದರು
ಗುಜರಾತ್ ಜೈಂಟ್ಸ್ ರೇಡರ್ ರಾಕೇಶ್ ಪಾಯಿಂಟ್ಸ್ ಗಳಿಸಲು ಪ್ರಯತ್ನಿಸಿದರು   

ಬೆಂಗಳೂರು: ಪ್ರದೀಪ್ ನರ್ವಾಲ್ ಮತ್ತು ಸುರೇಂದರ್ ಗಿಲ್ ಅವರ ಅಮೋಘ ಆಟದ ಬಲದಿಂದ ಯುಪಿ ಯೋಧಾ ತಂಡವು ಬುಧವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಜಯಸಾಧಿಸಿತು.

ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಯೋಧಾ 41–37ರಿಂದ ತಮಿಳ್ ತಲೈವಾಸ್ ವಿರುದ್ಧ ಗೆದ್ದಿತು.

ಯೋಧಾ ತಂಡವು ಮೊದಲಾರ್ಧದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿರಲಿಲ್ಲ. ಆದರೆ ತಲೈವಾಸ್ ಚುರುಕಿನ ಆಟವಾಡಿತ್ತು. ಅದರಿಂದಾಗಿ ವಿರಾಮದ ವೇಳೆಗೆ 22–20ರಿಂದ ಮುನ್ನಡೆ ಸಾಧಿಸಿತ್ತು. ವಿರಾಮದ ನಂತರ ಭರ್ಜರಿ ದಾಳಿ ಮಾಡಿದ ಯೋಧಾ ತಂಡವು 21 ಅಂಕಗಳನ್ನು ಸೂರೆ ಮೂಡಿತು. ಈ ಅವಧಿಯಲ್ಲಿ ತಲೈವಾಸ್ ಕೇವಲ 17 ಪಾಯಿಂಟ್ಸ್ ಗಳಿಸಿತು. ಅದರಿಂದಾಗಿ ಹಿನ್ನಡೆ ಅನುಭವಿಸಿತು.

ADVERTISEMENT

ಯೋಧಾ ತಂಡದ ಪ್ರದೀಪ್ 10 ಮತ್ತು ಗಿಲ್ 13 ಅಂಕಗಳನ್ನು ಗಳಿಸಿದರು. ತಲೈವಾಸ್ ತಂಡದ ಮಂಜೀತ್ 12 ಮತ್ತು ರಕ್ಷಣಾ ವಿಭಾಗದಲ್ಲಿ ಹಿಮಾಂಶು 8 ಅಂಕಗಳನ್ನು ಗಳಿಸಿದರು.

ಗುಜರಾತ್‌ಗೆ ರೋಚಕ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 34–32ರಿಂದ ತೆಲುಗು ಟೈಟನ್ಸ್ ವಿರುದ್ಧ ಗೆದ್ದಿತು.

ರೇಡರ್ ರಾಕೇಶ್ 8 ಮತ್ತು ಮಹೇಂದ್ರ ರಜಪೂತ್ (5) ಅವರ ಅಮೋಘ ಆಟದ ಬಲದಿಂದ ಗುಜರಾತ್ ಗೆದ್ದಿತು. ಟೈಟನ್ಸ್ ತಂಡದಲ್ಲಿ ರಜನೀಶ್ 10 ಅಂಕಗಳನ್ನು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.