ADVERTISEMENT

ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್‌: ಸವಾಲು ಮುನ್ನಡೆಸಲಿರುವ ಸಿಂಧು, ಲಕ್ಷ್ಯ

ಪಿಟಿಐ
Published 15 ಏಪ್ರಿಲ್ 2025, 12:58 IST
Last Updated 15 ಏಪ್ರಿಲ್ 2025, 12:58 IST
ಬ್ಯಾಡ್ಮಿಂಟನ್‌
ಬ್ಯಾಡ್ಮಿಂಟನ್‌   

ನವದೆಹಲಿ: ಅನುಭವಿ ಆಟಗಾರ್ತಿ ಪಿ.ವಿ.ಸಿಂಧು ಮತ್ತು ವಿಶ್ವದ 18ನೇ ಕ್ರಮಾಂಕದ ಆಟಗಾರ ಲಕ್ಷ್ಯ ಸೇನ್ ಅವರು ಇದೇ 27 ರಿಂದ ಮೇ 4ರವರೆಗೆ ಚೀನಾದ ಷಾಮನ್‌ನಲ್ಲಿ ನಡೆಯಲಿರುವ ಸುದೀರ್‌ಮನ್ ಕಪ್‌ ಫೈನಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ ಎಂದು ಭಾರತ ಬ್ಯಾಡ್ಮಿಂಟನ್ ಫೆಡರೇಷನ್ ಮಂಗಳವಾರ ತಿಳಿಸಿದೆ.

ವಿಶ್ವ ರ್‍ಯಾಂಕಿಂಗ್ ಆಧಾರದಲ್ಲಿ ಈ ಪ್ರತಿಷ್ಠಿತ ಮಿಶ್ರ ತಂಡ ವಿಭಾಗದ ಚಾಂಪಿಯನ್‌ಷಿಪ್ಸ್‌ಗೆ ಅರ್ಹತೆ ಪಡೆದಿರುವ ಭಾರತ ‘ಡಿ’ ಗುಂಪಿನಲ್ಲಿದೆ. ಮಾಜಿ ಚಾಂಪಿಯನ್ ಇಂಡೊನೇಷ್ಯಾ, ಎರಡು ಬಾರಿಯ ರನ್ನರ್‌ ಅಪ್‌ ಡೆನ್ಮಾರ್ಕ್ ಮತ್ತು ಇಂಗ್ಲೆಂಡ್ ಇದೇ ಗುಂಪಿನಲ್ಲಿವೆ.

ದೇಶದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಗಾಯಾಳಾಗಿ ಕೆಲವು ಟೂರ್ನಿಗಳಲ್ಲಿ ಆಡಿರಲಿಲ್ಲ. ಈಗ ಇವರಿಬ್ಬರೂ 14 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಭಾರತದ ಅಗ್ರ ಮಹಿಳಾ ಡಬಲ್ಸ್ ಜೋಡಿಯಾದ ಗಾಯತ್ರಿ ಗೋಪಿಚಂದ್‌ ಮತ್ತು ಟ್ರೀಸಾ ಜೋಳಿ ಗಾಯಾದ ಸಮಸ್ಯೆಯಿಂದ ಇಲ್ಲಿ ಆಡುತ್ತಿಲ್ಲ. ಅವರ ಗೈರುಹಾಜರಿಯಲ್ಲಿ ಯುವ ಜೋಡಿಯಾದ ಪ್ರಿಯಾ ಕೊಂಜೆಂಗ್‌ಬಾಮ್– ಶ್ರುತಿ ಮಿಶ್ರಾ ಅವರು ಹೊಣೆ ವಹಿಸಲಿದ್ದಾರೆ.

ADVERTISEMENT

ಹರಿಹರನ್ ಅಮ್ಸಕರುಣನ್ ಮತ್ತು ರುಬನ್ ಕುಮಾರ್ ರೆಥಿನಾಸಭಾಫತಿ ಅವರನ್ನು ಡಬಲ್ಸ್‌ನಲ್ಲಿ ಮೀಸಲು ಆಟಗಾರರಾಗಿ ಹೆಸರಿಸಲಾಗಿದೆ. ಸಾತ್ವಿಕ್‌–ಚಿರಾಗ್ ಹಿಂದೆಸರಿದಲ್ಲಿ ಇವರಿಬ್ಬರು ಡಬಲ್ಸ್ ಆಡಬೇಕಾಗುತ್ತದೆ.

ಪುರುಷರ ಸಿಂಗಲ್ಸ್, ಮಹಿಳಾ ಸಿಂಗಲ್ಸ್‌, ಎರಡೂ ವಿಭಾಗದಲ್ಲಿ ಡಬಲ್ಸ್‌, ಮಿಶ್ರ ಡಬಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯುತ್ತವೆ. ಇಂಡೊನೇಷ್ಯಾ ಆಟಗಾರರಾಗಿದ್ದ ಸುದೀರ್‌ಮನ್ ಹೆಸರಿನಲ್ಲಿ ಈ ಟೂರ್ನಿ ನಡೆಯುತ್ತಿದೆ.

ಸಿಂಗಲ್ಸ್‌ನಲ್ಲಿ ಸೇನ್‌ ಜೊತೆ ಎಚ್‌.ಎಸ್‌.ಪ್ರಣಯ್‌, ಸಿಂಧು ಜೊತೆ ಅನುಪಮಾ ಉಪಾಧ್ಯಾಯ ಅವರು ಸ್ಥಾನ ಪಡೆದಿದ್ದಾರೆ. ಸಿಂಧು ಕಳೆದ ವಾರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲಾ– ತನಿಶಾ ಕ್ರಾಸ್ಟೊ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಇವರಿಬ್ಬರು ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಎಂಟರ ಘಟ್ಟ ತಲುಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.