ಚೆನ್ನೈ: ಭಾರತದ ಅರ್ಜುನ್ ಇರಿಗೇಶಿ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ಆರನೇ ಸುತ್ತಿನ ಬಹುನಿರೀಕ್ಷಿತ ಪಂದ್ಯವನ್ನು ಅಗ್ರಸ್ಥಾನಿ ವಿನ್ಸೆಂಟ್ ಕೀಮರ್ ಜೊತೆ ಕಠಿಣ ಹೋರಾಟದ ನಂತರ ಡ್ರಾ ಮಾಡಿಕೊಂಡರು. ಮಂಗಳವಾರದ ಬಳಿಕ ಜರ್ಮನಿಯ ಗ್ರ್ಯಾಂಡ್‌ಮಾಸ್ಟರ್ ಒಂದು ಪಾಯಿಂಟ್‌ನ ಮುನ್ನಡೆ ಉಳಿಸಿಕೊಂಡಿದ್ದಾರೆ.
ಈ ಟೂರ್ನಿಯಲ್ಲಿ ಅಜೇಯರಾಗಿರುವ ಕೀಮರ್ 4.5 ಪಾಯಿಂಟ್ಸ್ ಹೊಂದಿದ್ದಾರೆ. ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ 3.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಕಿರಿಯ ಗ್ರ್ಯಾಂಡ್‌ಮಾಸ್ಟರ್‌ಗಳಿಬ್ಬರ ಸೆಣಸಾಟದಲ್ಲಿ ಅಮೆರಿಕದ 22 ವರ್ಷ ವಯಸ್ಸಿನ ಅವಾಂಡರ್ ಲಿಯಾಂಗ್ (3.5 ಪಾಯಿಂಟ್) ಅವರು 18 ವರ್ಷ ವಯಸ್ಸಿನ ಪ್ರಣವ್ ವಿ. (2 ಪಾಯಿಂಟ್) ಅವರನ್ನು ಸೋಲಿದರು. ಲಿಯಾಂಗ್ ಮತ್ತು ಅರ್ಜುನ್ ತಲಾ 3.5 ಪಾಯಿಂಟ್ಸ್ ಕಲೆಹಾಕಿದ್ದಾರೆ. ಇನ್ನು ಮೂರು ಸುತ್ತುಗಳಷ್ಟೇ ಉಳಿದಿದ್ದು ಪ್ರಶಸ್ತಿಗೆ ಪೈಪೋಟಿ ಜೋರಾಗಿದೆ.
ವಿದಿತ್ ಗುಜರಾತಿ (3) ಮತ್ತು ಡಚ್ ಗ್ರ್ಯಾಂಡ್‌ಮಾಸ್ಟರ್ ಅನಿಶ್ ಗಿರಿ (3) ಡ್ರಾ ಮಾಡಿಕೊಂಡರು. ನೆದರ್ಲೆಂಡ್ಸ್‌ನ ಇನ್ನೊಬ್ಬ ಆಟಗಾರ ಜೋರ್ಡನ್ ವಾನ್ ಫೋರಿಸ್ಟ್ (3) ಕಪ್ಪು ಕಾಯಿಗಳಲ್ಲಿ ಆಡಿ ಭಾರತದ ನಿಹಾಲ್ ಸರಿನ್ ಅವರನ್ನು ಸೋಲಿಸಿದರು. ಕಾರ್ತಿಕೇಯನ್ ಮುರಳಿ (3) ಮತ್ತು ಅಮೆರಿಕದ ರೇ ರಾಬ್ಸನ್ (2.5) ನಡುವಣ ಪಂದ್ಯ ಡ್ರಾ ಆಯಿತು.
ಚಾಲೆಂಜರ್ಸ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಅಭಿಮನ್ಯು ಪುರಾಣಿಕ್ (4.5) ಅವರಿಗೆ ಆರನೇ ಸುತ್ತಿನಲ್ಲಿ ಎಂ.ಪ್ರಾಣೇಶ್ (4.5) ಸೋಲುಣಿಸಿದರು. ಈಗ ಈ ವಿಭಾಗದಲ್ಲಿ ಮೂವರು ಮುನ್ನಡೆ ಹಂಚಿಕೊಂಡಿದ್ದಾರೆ. ಇದು ಅಭಿಮನ್ಯುಗೆ ಮೊದಲ ಸೋಲು.
ಲಿಯಾನ್ ಮೆಂಡೋನ್ಸಾ (4.5) ಅವರು ಆರ್ಯನ್ ಮಿಶ್ರಾ (1.5) ಅವರನ್ನು ಮಣಿಸಿದರು. ಗ್ರ್ಯಾಂಡ್‌ಮಾಸ್ಟರ್ಸ್ ಆಟಗಾರ್ತಿಯರ ಕದನದಲ್ಲಿ ಡಿ.ಹಾರಿಕಾ (1.5) ಅವರು ವೈಶಾಲಿ ಆರ್. (1) ಅವರನ್ನು ಸೋಲಿಸಿದರು. ಆದಿಬನ್ (3.5) ಅವರು ದೀಪ್ತಾಯನ್ ಘೋಷ್ (3.5) ಅವರನ್ನು ಸೋಲಿಸಿದರು. ಈ ವಿಭಾಗದಲ್ಲಿ ಡ್ರಾ ಆದ ದಿನದ ಏಕೈಕ ಪಂದ್ಯದಲ್ಲಿ ಪಾ.ಇನಿಯನ್ (3.5), ಹರ್ಷವರ್ಧನ್ (2) ಜೊತೆ ಅಂಕ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.