ADVERTISEMENT

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ರವಿ ದಹಿಯಾಗೆ ಚಿನ್ನದ ಪದಕ

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌ಗೆ ಬೆಳ್ಳಿ

ಪಿಟಿಐ
Published 17 ಏಪ್ರಿಲ್ 2021, 14:40 IST
Last Updated 17 ಏಪ್ರಿಲ್ 2021, 14:40 IST
ಬಜರಂಗ್ ಪುನಿಯಾ– ಪಿಟಿಐ ಚಿತ್ರ
ಬಜರಂಗ್ ಪುನಿಯಾ– ಪಿಟಿಐ ಚಿತ್ರ   

ಆಲ್ಮಾಟಿ, ಕಜಕಸ್ತಾನ: ಒಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸಿರುವ ಭಾರತದ ಪೈಲ್ವಾನ್‌ ರವಿ ದಹಿಯಾ, ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆದರೆ ಮೊಣಕೈ ಗಾಯದ ಹಿನ್ನೆಲೆಯಲ್ಲಿ ಫೈನಲ್‌ನಿಂದ ಹಿಂದೆ ಸರಿದ ಬಜರಂಗ್ ಪೂನಿಯಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ರವಿ, ಈ ಆವೃತ್ತಿಯಲ್ಲಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು. 57 ಕೆಜಿ ವಿಭಾಗದ ಫೈನಲ್‌ನಲ್ಲಿ ಅವರು ಇರಾನ್‌ನ ಅಲಿರೆಜಾ ನೊರ್ಸತೊಲಾಹ್ ಅವರನ್ನು ಸುಲಭವಾಗಿ ಮಣಿಸಿದರು.

ವೇಗದ ನಡೆಗಳಿಂದ ಗಮನಸೆಳೆದ ರವಿ 9–4ರಿಂದ ಅಲಿರೆಜಾ ಅವರಿಗೆ ಸೋಲುಣಿಸಿದರು.

ADVERTISEMENT

ಮೊದಲ ಸುತ್ತಿನಲ್ಲಿ ಉಜ್ಬೆಕಿಸ್ತಾನದ ನೊದಿರ್ಜಾನ್‌ ಸಫರೊವ್ ಎದುರು 9–2ರಿಂದ ಗೆಲುವು ದಾಖಲಿಸಿದ್ದ ಅವರು, ಬಳಿಕ ಪ್ಯಾಲೆಸ್ಟೀನ್‌ನ ಅಲಿ ಎಂ.ಎಂ. ಅಬುರುಮೈಲ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯಿಸಿದರು.

65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಜರಂಗ್ ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲೇ ಗಾಯದಿಂದ ಬಳಲಿದ್ದರು. ಫೈನಲ್‌ ಆಡಿದ್ದರೆ ನೋವು ಉಲ್ಬಣಗೊಳ್ಳುತ್ತಿತ್ತು ಎಂದು ಅವರು ತಿಳಿಸಿದರು.

ಚಿನ್ನದ ಪದಕದ ಸುತ್ತಿನಲ್ಲಿ ಅವರು, ಜಪಾನ್‌ನ ಪರಿಚಿತ ಎದುರಾಳಿ ತಕುಟೊ ಒಟೊಗುರಾ ಎದುರು ಸೆಣಸಬೇಕಿತ್ತು. 2018ರ ವಿಶ್ವ ಚಾಂಪಿಯನ್‌ಷಿಪ್ ಮತ್ತು ಕಳೆದ ವರ್ಷದ ಏಷ್ಯನ್ ಚಾಂಪಿಯನ್‌ಷಿಪ್‌ನ ಫೈನಲ್‌ಗಳಲ್ಲಿ ತಕುಟೊ ವಿರುದ್ಧ ಬಜರಂಗ್ ಸೋಲು ಅನುಭವಿಸಿದ್ದರು.

ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಜರಂಗ್‌, ಮಂಗೋಲಿಯಾದ ಬಿಲ್ಗೂನ್‌ ಸರ್ಮಾಂದಕ್ ಅವರನ್ನು ಮಣಿಸಿದ್ದರು.

ಕರಣ್‌ಗೆ ಕಂಚು

70 ಕೆಜಿ ವಿಭಾಗದಲ್ಲಿ ಕರಣ್ ಕಂಚಿನ ಪದಕ ಗಳಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ 0–6ರಿಂದ ಕಜಕಸ್ತಾನದ ಸಿರ್ಬಾಜ್‌ ತಲ್ಗಟ್‌ ಎದುರು ಎಡವಿದ್ದ ಕರಣ್‌ ಅವರಿಗೆ ರೆಪಚೇಜ್ ಮೂಲಕ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಆಡುವ ಅವಕಾಶ ಲಭಿಸಿತ್ತು. ಈ ಪಂದ್ಯದಲ್ಲಿ ಅವರು ಕೊರಿಯಾದ ಸಿಯುಂಗ್‌ಬಾಂಗ್ ಎದುರು 3–1ರಿಂದ ಗೆದ್ದರು.

ಸತ್ಯವರ್ತ್ ಕಡಿಯಾನ್‌ ಹಾಗೂ ನರಸಿಂಗ್ ಪಂಚಮ್ ಯಾದವ್ ಅವರು ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

97 ಕೆಜಿ ವಿಭಾಗದಲ್ಲಿ ಸತ್ಯವರ್ತ್‌ 8–0ಯಿಂದ ಕಿರ್ಗಿಸ್ತಾನದ ಅರ್ಸಲಾನ್ಬೆಕ್‌ ತುರ್ದುಬೆಕೊವ್ ಅವರನ್ನು ಪರಾಭವಗೊಳಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಎಂಟರಘಟ್ಟದಲ್ಲಿ 4–1ರಿಂದ ಉಜ್ಬೆಕಿಸ್ತಾನದ ಮುಖಮ್ಮದ್‌ರಸೂಲ್‌ ರಖಿಮೊವ್ ಅವರನ್ನು ಚಿತ್ ಮಾಡಿದ್ದರು.

ಆದರೆ 25 ಸೆಕೆಂಡುಗಳಲ್ಲಿ ಕೊನೆಗೊಂಡ ನಾಲ್ಕರಘಟ್ಟದ ಹಣಾಹಣಿಯಲ್ಲಿ ಇರಾನ್‌ನ ಅಲಿ ಖಲೀಲ್ ಎದುರು ಸತ್ಯವರ್ತ್ ಮುಗ್ಗರಿಸಿದರು. ಅಲಿ ಅವರಿಗೆ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆಲುವು ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.