ADVERTISEMENT

ಬ್ಯಾಡ್ಮಿಂಟನ್: ಸಿಂಧು ಜೊತೆ ತೆರಳಲು ಫಿಸಿಯೊ, ಫಿಟ್‌ನೆಸ್ ಕೋಚ್‌ಗೆ ಅನುಮತಿ

ಜನವರಿಯಲ್ಲಿ ಮೂರು ಟೂರ್ನಿಗಳಲ್ಲಿ ಭಾಗವಹಿಸಲಿರುವ ವಿಶ್ವ ಚಾಂಪಿಯನ್ ಆಟಗಾರ್ತಿ

ಪಿಟಿಐ
Published 18 ಡಿಸೆಂಬರ್ 2020, 10:55 IST
Last Updated 18 ಡಿಸೆಂಬರ್ 2020, 10:55 IST
ಪಿ.ವಿ.ಸಿಂಧು–ಪಿಟಿಐ ಚಿತ್ರ
ಪಿ.ವಿ.ಸಿಂಧು–ಪಿಟಿಐ ಚಿತ್ರ   

ನವದೆಹಲಿ: ಮುಂದಿನ ವರ್ಷದ ಜನೆವರಿಯಲ್ಲಿ ನಡೆಯುವ ಮೂರು ಟೂರ್ನಿಗಳಲ್ಲಿ ಭಾಗವಹಿಸಲು, ಫಿಸಿಯೊ ಮತ್ತು ಫಿಟ್‌ನೆಸ್ ತರಬೇತುದಾರರು ತನ್ನೊಂದಿಗೆ ಬರಲು ಅವಕಾಶ ನೀಡುವಂತೆ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಸಲ್ಲಿಸಿದ್ದ ಮನವಿಯನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಶುಕ್ರವಾರ ಅಂಗೀಕರಿಸಿದೆ.

ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ (ಟಾಪ್ಸ್) ಭಾಗವಾಗಿರುವ ಸಿಂಧು, ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ದೀರ್ಘ ವಿರಾಮದ ಬಳಿಕ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುತ್ತಿದ್ದಾರೆ.

‘ಯೊನೆಕ್ಸ್ ಥಾಯ್ಲೆಂಡ್ ಓಪನ್‌ (ಜನೆವರಿ 12ರಿಂದ 17), ಟೊಯೊಟಾ ಥಾಯ್ಲೆಂಡ್ ಓಪನ್‌ (ಜನೆವರಿ 19–24) ಹಾಗೂ ವಿಶ್ವ ಟೂರ್ ಫೈನಲ್ಸ್ (ಅರ್ಹತೆ ಗಳಿಸಿದರೆ, ಜನೆವರಿ 27–30) ಟೂರ್ನಿಗಳಲ್ಲಿ ಭಾಗವಹಿಸಲು ತನ್ನೊಂದಿಗೆ ಬರಲು ಫಿಸಿಯೊ ಹಾಗೂ ಫಿಟ್‌ನೆಸ್ ಕೋಚ್‌ಗೆ ಅವಕಾಶ ನೀಡಬೇಕೆಂದು ಸಿಂಧು ಸಲ್ಲಿಸಿದ ಬೇಡಿಕೆಗೆ ಸರ್ಕಾರ ಒಪ್ಪಿದೆ‘ ಸಾಯ್ ತಿಳಿಸಿದೆ.

ADVERTISEMENT

‘ಈ ಮೂರು ಟೂರ್ನಿಗಳಿಗೆ ಅವರ ಫಿಸಿಯೊ ಹಾಗೂ ಫಿಟ್‌ನೆಸ್ ಕೋಚ್‌ ಅವರ ಸೇವೆಗಳಿಗೆ ತಗಲುವ ಅಂದಾಜು ₹ 8.25 ಲಕ್ಷ ಮೊತ್ತವನ್ನು ಸರ್ಕಾರ ಮಂಜೂರು ಮಾಡುತ್ತಿದೆ‘ ಎಂದು ಸಾಯ್ ಹೇಳಿದೆ.

ಸಿಂಧು ಅವರು ಸದ್ಯ ಲಂಡನ್‌ನಲ್ಲಿದ್ದು ನ್ಯೂಟ್ರಿಷನ್‌ ಮತ್ತು ಫಿಟ್‌ನೆಸ್‌ ವಿಷಯಕ್ಕೆ ಸಂಬಂಧಿಸಿ ಲಂಡನ್‌ನ ಗ್ಯಾಟೊರೇಡ್‌ ಕ್ರೀಡಾ ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.